ಶಿರಸಿ : ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಈಜಿ ಬಂದು ಶಿರಸಿ ಹೆಸ್ಕಾಂ ಸಿಬ್ಬಂದಿ ಮುಳುಗಡೆ ಪ್ರದೇಶದ ವಿದ್ಯುತ್ ವ್ಯವಸ್ಥೆ ಸರಿಪಡಿಸಿಕೊಟ್ಟಿದ್ದು, ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ. ವಿದ್ಯುತ್ ಸಿಬ್ಬಂದಿ ನೀರಿನಲ್ಲಿ ಈಜಿ ಬಂದಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಶಿರಸಿ ತಾಲೂಕಿನ ಬನವಾಸಿಯಲ್ಲಿ ವರದಾ ನದಿ ಉಕ್ಕಿ ಹರಿದ ಕಾರಣ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಇದರಿಂದ ನದಿ ಪಾತ್ರದ ಗ್ರಾಮಗಳಾದ ಅಜ್ಜರಣಿ ಮತ್ತು ಮತಗುಣಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಬಗ್ಗೆ ಮಾಹಿತಿ ಪಡೆದ ಶಿರಸಿ ಹೆಸ್ಕಾಂ ಸಿಬ್ಬಂದಿ ನದಿಯಲ್ಲಿ ಈಜಿಕೊಂಡು ಬಂದು ವಿದ್ಯುತ್ ವ್ಯವಸ್ಥೆ ಸರಿಪಡಿಸಿಕೊಟ್ಟಿದ್ದಾರೆ.
ಓದಿ : ಕೊಚ್ಚಿ ಹೋದ ಮನೆಗಳು: ಅಕ್ಕಿ ಬಟ್ಟೆ ಎಲ್ಲ ನೀರುಪಾಲು.. ಉತ್ತರ ಕನ್ನಡ ಮಂದಿ ಬದುಕು ಅತಂತ್ರ
ವರದಾ ನದಿಯ ಪ್ರವಾಹದಿಂದ ಅಜ್ಜರಣಿ ಮತ್ತು ಮತಗುಣಿ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಮಾಡುವ 11 ಕೆ.ವಿ ಲೈನ್ ಮತ್ತು ಒಂದು ಪರಿವರ್ತಕ ಸಂಪೂರ್ಣ ನೀರಿನಲ್ಲಿ ಮುಳುಗಿದ್ದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಿತ್ತು. ಹೆಸ್ಕಾ ಸಿಬ್ಬಂದಿ ಪ್ರಾಣ ಪಣಕ್ಕಿಟ್ಟು ನದಿಯಲ್ಲಿ ಈಜಿ ಬಂದು ಶನಿವಾರ ಸಂಜೆಯ ವೇಳೆಗೆ ವಿದ್ಯುತ್ ವ್ಯವಸ್ಥೆ ದುರಸ್ಥಿಗೊಳಿಸಿದ್ದಾರೆ.