ಬಂಟ್ವಾಳ: ತಾಲೂಕಿನ ಚರ್ಚ್ಗಳಲ್ಲಿ ಕನ್ಯಾಮಾತೆ ಮರಿಯಮ್ಮನವರ ಹುಟ್ಟು ಹಬ್ಬದ ಪ್ರಯುಕ್ತ ಸರಳವಾಗಿ ಮೊಂತಿ ಹಬ್ಬ (ತೆನೆ ಹಬ್ಬ) ಆಚರಿಸಲಾಯಿತು.
ತಾಲೂಕಿನ ಲೊರೆಟ್ಟೊ ಮಾತಾ ಚರ್ಚ್ನಲ್ಲಿ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತ, ವಂ. ರೊಯ್ಸ್ಟನ್ ನೇತೃತ್ವದಲ್ಲಿ ಬಲಿಪೂಜೆ ನಡೆಯಿತು. ಕೋವಿಡ್ ಹಿನ್ನೆಲೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಆದೇಶದಂತೆ ಕನ್ಯಾಮಾತೆಯ ಪಲ್ಲಕ್ಕಿ ಮೆರವಣಿಗೆಯಲ್ಲಿ ಕೊಂಡೊಯ್ಯುವುದನ್ನು ರದ್ದುಪಡಿಸಲಾಗಿತ್ತು. ಬಲಿ ಪೂಜೆಯಲ್ಲಿ ಭಕ್ತಾದಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ಪಾಲ್ಗೊಳ್ಳಲು ಬೇಕಾದ ಆಸನದ ವ್ಯವಸ್ಥೆ ಮಾಡಲಾಗಿತ್ತು ಮತ್ತು ಎಲ್ಇಡಿ ಪರದೆ ಅಳವಡಿಸಲಾಗಿತ್ತು.
ಇದೇ ವೇಳೆ ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಚರ್ಚ್ ವತಿಯಿಂದ ಸನ್ಮಾನಿಸಲಾಯಿತು. ಚರ್ಚ್ ಪಾಲನಾ ಮಂಡಳಿ ಸಂಭ್ರಮದ ನೇತೃತ್ವ ವಹಿಸಿತ್ತು.