ಮಂಗಳೂರು : ನಾವು ಹಿಂದೂ ಧರ್ಮದ ಮೇಲೆ ನಂಬಿಕೆಯಿಟ್ಟವರು. ಎಲ್ಲಾ ಧರ್ಮಗಳಿಗೆ ಸಮಾನ ಗೌರವ ಕೊಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಭಗವದ್ಗೀತೆ, ಬೈಬಲ್, ಕುರಾನ್ ಹೇಳಿಕೊಡಲು ನಮ್ಮದೇನೂ ಆಕ್ಷೇಪವಿಲ್ಲ. ಆದರೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು. ಭಗವದ್ಗೀತೆಯನ್ನು ಶಾಲೆಯಲ್ಲಿ ಮೌಲ್ಯ ಶಿಕ್ಷಣವಾಗಿ ಬೋಧನೆ ಮಾಡಲು ಸರ್ಕಾರ ತೀರ್ಮಾನ ಮಾಡಿಲ್ಲ. ಆದರೆ, ಗುಜರಾತಿನಲ್ಲಿ ಮಾತ್ರ ಮಾಡಲಾಗಿದೆ ಎಂದರು.
ಭಗವದ್ಗೀತೆ, ರಾಮಾಯಣ,ಮಹಾಭಾರತಗಳ ಬಗ್ಗೆ ಮನೆಯಲ್ಲಿ ಹೇಳಿ ಕೊಡುತ್ತಾರೆ. ಮಕ್ಕಳಿಗೆ ನೈತಿಕ ಶಿಕ್ಷಣ ಬೇಕು. ಆದರೆ, ಸಂವಿಧಾನಕ್ಕೆ ವಿರುದ್ಧವಾಗಿ ಯಾವುದೂ ನಡೆಯಬಾರದು. ನಾನು ಭಗವದ್ಗೀತೆ, ಬೈಬಲ್, ಕುರಾನ್ ಯಾವುದರ ವಿರೋಧಿಯೂ ಅಲ್ಲ. ನಮ್ಮದು ಬಹು ಸಂಸ್ಕೃತಿ ಇರುವ ರಾಷ್ಟ್ರ. ನಮ್ಮಲ್ಲಿ ಸಹಬಾಳ್ವೆ ಇರಬೇಕು. ನಾನು ಸಹಿಷ್ಣುತೆ ಮತ್ತು ಸಹಬಾಳ್ವೆಯಲ್ಲಿ ನಂಬಿಕೆ ಇರುವವನು ಎಂದರು.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಕನ್ನಡಕ್ಕೆ ಡಬ್ ಮಾಡುವ ವಿಚಾರವಾಗಿ ಮಾತನಾಡಿ, ಸಿನಿಮಾ ಮಾಡಿ ತೋರಿಸುವುದಕ್ಕೆ ಬೇಡ ಅಂದಿಲ್ಲ. ಆದರೆ, ಸತ್ಯವನ್ನು ತೋರಿಸಬೇಕು. ಕಾಶ್ಮೀರದ ಉಗ್ರರರ ಕೃತ್ಯ, ಪಂಡಿತರ ಜೊತೆಗೆ ಬೇರೆ ಯಾರಿಗೆ ಸಮಸ್ಯೆಯಾಗಿತ್ತು ಎಂಬುದನ್ನು ಹೇಳಬೇಕು. ಆಗ ಯಾರ ಸರ್ಕಾರ ಇತ್ತು, ಏನು ಮಾಡಿತ್ತು ಎಂಬುದನ್ನು ತೋರಿಸಬೇಕು. ಗುಜರಾತ್ ಘಟನೆ, ಲಖಿನ್ ಪುರ್ ಘಟನೆ ಎಲ್ಲಾನೂ ತೋರಿಸಬೇಕು ಎಂದೇಳಿದ ಅವರು, ನಾನು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡೋಲ್ಲ ಎಂದರು.
ಹೈಕೋರ್ಟ್ ತೀರ್ಪು ವಿರೋಧಿಸಿ ಮುಸ್ಲಿಂ ಸಂಘಟನೆಗಳ ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿ, ಅಸಮಾಧಾನ ಇರುವವರು ಬಂದ್ ಮಾಡಿದ್ದಾರೆ. ಕೋರ್ಟ್ ನಿರ್ಧಾರ ವಿರೋಧಿಸಬಾರದು. ಹೈಕೋರ್ಟ್, ಸುಪ್ರೀಂಕೋರ್ಟ್ ಯಾವುದರ ನಿರ್ಧಾರವನ್ನೂ ವಿರೋಧಿಸಬಾರದು. ಹಿಂದೂ, ಮುಸ್ಲಿಂ ಯಾರೇ ಆಗಲಿ ಕೋಮುವಾದ ಮಾಡಬಾರದು. ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣಬೇಕು ಎಂದೇಳಿದರು.
ಇದನ್ನೂ ಓದಿ: ಪಾವಗಡದ ಬಳಿ ಖಾಸಗಿ ಬಸ್ ಪಲ್ಟಿ: 5 ಮಂದಿ ಸಾವು, 25ಕ್ಕೂ ಅಧಿಕ ಮಂದಿಗೆ ಗಾಯ