ಮಂಗಳೂರು: ಬೋಟ್ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ನೀಡದಿದ್ದರೆ ಮೀನುಗಾರಿಕಾ ಸಚಿವರ ತಾರತಮ್ಯ ಎಂದು ಅರ್ಥೈಸಬೇಕಾಗುತ್ತದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಸುವರ್ಣ ತ್ರಿಭುಜ ಬೋಟ್ ದುರಂತದ ವೇಳೆ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ರಾಜ್ಯ ಸರ್ಕಾರ ಹತ್ತು ಲಕ್ಷ ಪರಿಹಾರ ನೀಡಿತ್ತು. ಆದರೆ ಮಂಗಳೂರು ಬೋಟ್ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ 6 ಲಕ್ಷ ಪರಿಹಾರ ಘೋಷಿಸಲಾಗಿದೆ. ಉಡುಪಿ ಮೀನುಗಾರರು ಮತ್ತು ಮಂಗಳೂರು ಮೀನುಗಾರರು ಬೇರೆ ಎಂದು ತಾರತಮ್ಯ ಇರಬಾರದು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಉಡುಪಿ ಜಿಲ್ಲೆಯವರಾಗಿರಬಹುದು. ಆದರೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು. ಅವರು ತಾರತಮ್ಯ ಮಾಡದೆ ಪರಿಹಾರ ವಿತರಿಸಬೇಕಾಗಿದೆ. ಈ ಬಗ್ಗೆ ಆಗಿರುವ ತಪ್ಪನ್ನು ಅವರು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಲವ್ ಜಿಹಾದ್ಗೆ ಸರ್ಕಾರ ಕಾನೂನು ರೂಪಿಸುತ್ತದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಲವ್ ಜಿಹಾದ್ ಕಾನೂನಿನಲ್ಲಿ ಅರೇಬಿಕ್ ಪದ ಯಾಕೆ. ಕರ್ನಾಟಕದ ಕಾನೂನಿಗೆ ಕನ್ನಡ ಪದದ ಬದಲು ಅರೇಬಿಕ್ ಪದ ಯಾಕೆ ಎಂದು ಪ್ರಶ್ನಿಸಿದರು. ಲವ್ ಜಿಹಾದ್ ಕಾನೂನು ರೂಪಿಸುತ್ತೇವೆ ಎಂಬ ಚರ್ಚೆ ಮಾಡಿ ಜನರಲ್ಲಿ ಗೊಂದಲ ಮೂಡಿಸುವುದು ಬೇಡ. ಅದರ ಬದಲಿಗೆ ವಿಧಾನಸಭೆಯಲ್ಲಿ ಮಂಡಿಸಿ ಎಂದರು.