ಮಂಗಳೂರು : ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಆರೋಪ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಆರೋಪಿಗೆ ಶಿಕ್ಷೆಯ ಪ್ರಮಾಣವನ್ನು ಸೋಮವಾರಕ್ಕೆ ಕಾಯ್ದಿರಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಉತ್ತರ ಭಾರತ ಮೂಲದ ಪ್ರಸ್ತುತ ಮಂಗಳೂರಿನ ಬೋಳಾರ ಸಮೀಪದ ಲೇಬರ್ ಕಾಲೋನಿಯ ನಿವಾಸಿ ಕಿಶೋರ್ ಬುಯ್ಯಾ(36) ಎಂಬಾತ 13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ನಡೆಸಿ ಗರ್ಭವತಿಯನ್ನಾಗಿಸಿದ್ದ.
ಬಾಲಕಿಯ ತಾಯಿ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಳಿಕ ನಿರಂತರವಾಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಪರಿಣಾಮ ಬಾಲಕಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಹೊಟ್ಟೆ ನೋವು ಕಾಣಿಸಿದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಬಾಲಕಿ ಗರ್ಭವತಿಯಾದ ವಿಷಯ ಬೆಳಕಿಗೆ ಬಂದಿದೆ.
ಈ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಕಿಶೋರ್ ಬುಯ್ಯಾನ ಮೇಲೆ ದೂರು ದಾಖಲಾಗಿತ್ತು. ಮಹಿಳಾ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕಲಾವತಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ಬಗ್ಗೆ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಧೀಶೆ ಎಂ ಆರ್ ಪಲ್ಲವಿ ಪರಿಶೀಲಿಸಿದಾಗ ಅತ್ಯಾಚಾರ (376), ಕೊಲೆ ಬೆದರಿಕೆ(506), ನಿರಂತರ ಲೈಂಗಿಕ ದೌರ್ಜನ್ಯ (5-6) ಮಾಡಿದ ಆರೋಪ ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣವನ್ನು ಸೋಮವಾರಕ್ಕೆ ಕಾಯ್ದಿರಿಸಿದ್ದಾರೆ.