ಮಂಗಳೂರು: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೊಂದಿಗೆ ಅಸ್ವಾಭಾವಿಕ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿ ದೌರ್ಜನ್ಯ ಎಸಗಿದ ಅಪರಾಧಿ ಉಪನ್ಯಾಸಕನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-1) ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಕುಳಾಯಿಯ ಪೃಥ್ವಿರಾಜ್ (33) ಶಿಕ್ಷೆಗೊಳಗಾದ ವ್ಯಕ್ತಿ. 2014ರ ಆ.1ರಿಂದ 2016ರ ಸೆ.2ರವರೆಗೆ ಪ್ರೌಢ ಶಾಲೆಯ ವಿದ್ಯಾರ್ಥಿಗೆ ಅಸ್ವಾಭಾವಿಕ ರೀತಿಯ ಲೈಂಗಿಕ ಕ್ರಿಯೆ ಮೂಲಕ ದೌರ್ಜನ್ಯ ಎಸಗಿದ್ದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪೃಥ್ವಿರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ವಿದ್ಯಾರ್ಥಿಯನ್ನು ಪೃಥ್ವಿರಾಜ್ ತನ್ನ ಮನೆಗೆ ಕರೆಯಿಸಿ ನಿರಂತರವಾಗಿ ಲೈಂಗಿಕ ಕ್ರಿಯೆಯನ್ನು ನಡೆಸುತ್ತಿದ್ದ. ಈ ಸಂಗತಿಯನ್ನು ಯಾರಿಗಾದರೂ ಹೇಳಿದರೆ ಪರೀಕ್ಷೆಯಲ್ಲಿ ಅಂಕ ಕಡಿತ ಮಾಡುತ್ತೇನೆ, ಹಾಜರಾತಿ ಕಡಿತ ಮಾಡುತ್ತೇನೆ ಎಂದು ಬೆದರಿಸಿದ್ದ. ಬಾಲಕನ ಮರ್ಮಾಂಗದಲ್ಲಿ ಗಾಯವಾದ ಬಳಿಕ ವೈದ್ಯರು ತಪಾಸಣೆ ನಡೆಸಿ ಚಿಕಿತ್ಸೆ ನೀಡುವ ವೇಳೆ ಬಾಲಕ ತನ್ನ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಮನೆಯವರು ಮತ್ತು ವೈದ್ಯರಿಗೆ ತಿಳಿಸಿದ್ದನು. ಅಂದಿನ ಸುರತ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಚೆಲುವರಾಜ್ ಬಿ. ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಂಜುಳಾ, ಆರೋಪ ದೃಢಪಟ್ಟಿರುವುದರಿಂದ ತಪ್ಪಿತಸ್ಥನೆಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಅಪರಾಧಿಗೆ ಪೋಕ್ಸೊ ಕಾಯ್ದೆ ಸೆಕ್ಷನ್ 6ರಡಿ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಹೆಚ್ಚುವರಿ ಕಠಿಣ ಸಜೆ, ಪೋಕ್ಸೊ ಸೆಕ್ಷನ್ 10ರಂತೆ 5 ವರ್ಷ ಸಾದಾ ಸಜೆ, ಐದು ಸಾವಿರ ರೂ ದಂಡ ಮತ್ತು ದಂಡ ಪಾವತಿಸಲು ತಪ್ಪಿದರೆ ಮೂರು ತಿಂಗಳ ಸಾದಾ ಸಜೆ, ಐಪಿಸಿ ಸೆಕ್ಷನ್ 377ರಡಿ 10 ವರ್ಷ ಕಠಿಣ ಸಜೆ, 10 ಸಾವಿರ ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಮೂರು ತಿಂಗಳ ಕಠಿಣ ಸಜೆ, ಐಪಿಸಿ 506ರಡಿ 1 ವರ್ಷ ಸಾದಾ ಸಜೆ, ಒಂದು ಸಾವಿರ ರೂ.ದಂಡ, ಒಂದು ವೇಳೆ ದಂಡ ಪಾವತಿಸದಿದ್ದರೆ ಹೆಚ್ಚುವರಿ ಒಂದು ತಿಂಗಳು ಹೆಚ್ಚುವರಿ ಸಾದಾ ಸಜೆ ವಿಧಿಸಿ ನ್ಯಾಯಾಧೀಶರು ತೀರ್ಪಿತ್ತಿದ್ದಾರೆ.
ಸಂತ್ರಸ್ತ ಬಾಲಕನಿಗೆ ರಾಜ್ಯ ಸರ್ಕಾರ 1 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾ ದೇವಿ ವಾದಿಸಿದ್ದರು.
ಇದನ್ನೂ ಓದಿ: ಬಾಗಲಕೋಟೆ: ಅತ್ಯಾಚಾರಿ ಅಪರಾಧಿಗೆ ಅಜೀವ ಜೀವಾವಧಿ ಶಿಕ್ಷೆ