ಮಂಗಳೂರು: ಬಾಲಕಿಯನ್ನು ಮದುವೆಯಾಗುತ್ತೇನೆ ಎಂದು ಪುಸಲಾಯಿಸಿ ದೈಹಿಕ ಸಂಪರ್ಕ ನಡೆಸಿ ಆಕೆ ಗರ್ಭ ಧರಿಸಲು ಕಾರಣನಾದ ಆರೋಪಿಮೇಲೆ ಪೊಕ್ಸೊ ಕಾಯ್ದೆಯಡಿ ಬಂಟ್ವಾಳದಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಚೆನೈತ್ತೋಡಿ ಗ್ರಾಮದ ಮಾವಿನಕಟ್ಟೆ ನಿವಾಸಿ ಸೋಮಶೇಖರ್ ವಿರುದ್ಧ ಪೊಕ್ಸೊ ಪ್ರಕರಣ ದಾಖಲಾಗಿದೆ. ನಾಲ್ಕು ತಿಂಗಳ ಹಿಂದೆ ಕೂಲಿ ಕೆಲಸಕ್ಕೆಂದು ಬಾಲಕಿ ತನ್ನ ಕುಟುಂಬದೊಂದಿಗೆ ಮಾವಿನಕಟ್ಟೆಗೆ ಬಂದಿದ್ದಳು. ರಾತ್ರಿ ತನ್ನ ಹೆತ್ತವರೊಂದಿಗೆ ವಾಸ್ತವ್ಯವಿದ್ದ ತಾತ್ಕಾಲಿಕ ಟೆಂಟ್ಗೆ ನುಗ್ಗಿ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗ್ತಿದೆ.
2019ನೇ ಜನವರಿ 5 ರಂದು ರಾತ್ರಿ 11.30ರ ಸುಮಾರಿಗೆ ಎಲ್ಲರೂ ಮಲಗಿದ್ದ ವೇಳೆ ಸ್ಥಳಕ್ಕೆ ಬಂದಿದ್ದ ಆರೋಪಿ ಸೋಮಶೇಖರ್ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿದ್ದನಂತೆ. ಅಷ್ಟೇ ಅಲ್ಲದೇ ಆಗಾಗ ಇದೇ ರೀತಿ ಹೇಳುತ್ತಾ ದೈಹಿಕ ಸಂಪರ್ಕವನ್ನು ಮುಂದುವರಿಸಿದ್ದರಿಂದ ಈಗ ಬಾಲಕಿ ಗರ್ಭಿಣಿಯಾಗಿದ್ದಾಳೆ. ಬಾಲಕಿಯ ಹೆತ್ತವರು ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.