ಮಂಗಳೂರು:ನಗರದ ನಂತೂರಿನಲ್ಲಿ ಸ್ಕೂಟರ್ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ನಗರದ ಸುಲ್ತಾನ್ ಬತ್ತೇರಿಯ ನಿವಾಸಿ ಸ್ಯಾಮುಯೆಲ್ ಜೇಸುದಾಸ್ (66) ಮತ್ತು ಅವರ ಸೊಸೆಯ ದೊಡ್ಡಮ್ಮನ ಮಗಳು ಭೂಮಿಕಾ (17) ಮೃತಪಟ್ಟವರು.
ಪಂಪ್ವೆಲ್ ಕಡೆಯಿಂದ ನಂತೂರ್ ಕಡೆಗೆ ಅತಿ ವೇಗದಿಂದ ಬರುತ್ತಿದ್ದ ಟಿಪ್ಪರ್ ಲಾರಿ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಲಾರಿಯೂ ಸ್ಕೂಟರ್ ಅನ್ನು ಅನತಿ ದೂರದವರೆಗೆ ಎಳೆದೊಯ್ದಿದೆ. ಇದೇ ವೇಳೆ ಇಬ್ಬರ ಮೇಲೆ ಲಾರಿ ಹರಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಲಾರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಅಪಘಾತ ಉಂಟಾಗಿದ್ದ ಸ್ಥಳದಲ್ಲಿ ಕೆಲ ಗಂಟೆ ಕಾಲ ಟ್ರಾಫಿಕ್ ಜಾಮ್ ಆಗಿತ್ತು.
ಅಪಘಾತ ಸ್ಥಳಕ್ಕೆ ಎಸಿಪಿ ಗೀತಾ ಕುಲಕರ್ಣಿ ಆಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಟ್ರಾಫಿಕ್ ಜಾಮ್ ಆಗಿದ್ದು, ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸದ್ಯ ಪೊಲೀಸರು ಆರೋಪಿ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ. ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸವಾರ್ ಸಾವು : ಪ್ರತ್ಯೇಕ ಘಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪ ಕಾಶಿಮಠದ ಸಮೀಪ ಶನಿವಾರ ಮಧ್ಯಾಹ್ನ ಬೋರ್ವೆಲ್ ಲಾರಿಯು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇನ್ನೊಬ್ಬ ತೀವ್ರ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಉಕ್ಕುಡದ ಅಲಂಗಾರು ನಿವಾಸಿ ರಂಜಿತ್ ಎಂಬ ಯುವಕ ಮೃತ ದುರ್ದೈವಿ. ಮತ್ತೋರ್ವ ಸವಾರ ನಿತಿನ್ (28) ತೀವ್ರವಾಗಿ ಗಾಯಗೊಂಡವ. ಈತನನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಟ್ಲ ಕಡೆಯಿಂದ ಉಕ್ಕುಡ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಎದುರಿನಿಂದ ಬಂದ ಬೋರ್ವೆಲ್ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಬಳಿಕ ಲಾರಿ ಬೈಕ್ ಸವಾರರನ್ನು ಕೆಲ ದೂರದವರೆಗೂ ಎಳೆದೊಯ್ದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರನ ತಲೆ ಛಿದ್ರವಾಗಿದೆ. ಅಪಘಾತದ ಸ್ಥಳಕ್ಕೆ ಪೊಲೀಸರು ಆಗಮಿಸಿ, ಪರಿಶೀಲನೆ ಕೈಗೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂಓದಿ: ತರಬೇತಿ ವಿಮಾನ ಪತನ: ಮಹಿಳಾ ಟ್ರೈನಿ ಪೈಲಟ್ ಸೇರಿ ಇಬ್ಬರ ಸಾವು
ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ಚಾಲಕ ಸೇರಿ ಇಬ್ಬರು ಅಪಘಾತದಲ್ಲಿ ದುರಂತ ಅಂತ್ಯ ಕಂಡ ಘಟನೆ ಶುಕ್ರವಾರ ಬೆಳಗ್ಗಿನ ಜಾವ ಬೆಂಗಳೂರಿನ ಸಿಲ್ಕ್ ಬೋರ್ಡ್ ಸಮೀಪದ ಹೊಸೂರು ರಸ್ತೆಯ ಎಕ್ಸ್‌ಪ್ರೆಸ್ ವೇನಲ್ಲಿ ನಡೆದಿತ್ತು. ಆಂಧ್ರಪ್ರದೇಶದ ಅನಂತಪುರ ಮೂಲದ ಕಾರ್ತಿಕ್ (23) ಹಾಗೂ ಭಗೀರಥ ರೆಡ್ಡಿ (17) ಎಂಬುವರು ಮೃತರಾಗಿದ್ದರು. ಅತಿ ವೇಗದಿಂದ ಸಾಗುತ್ತಿದ್ದ ಪರಿಣಾಮ ಕಾರ್ತಿಕ್ ರೆಡ್ಡಿ ಚಲಾಯಿಸುತ್ತಿದ್ದ ಕಾರು ಚತುಷ್ಪಥ ರಸ್ತೆಯ ವಿಭಜಕ ದಾಟಿ ಮತ್ತೊಂದು ಬದಿಯಲ್ಲಿ ಬರುತ್ತಿದ್ದ ಕಾರು ಹಾಗೂ ಬಸ್ಸಿಗೆ ಡಿಕ್ಕಿಯಾಗಿತ್ತು.