ಮಂಗಳೂರು: ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅದಕ್ಷ ಆಡಳಿತ ನಡೆಸುತ್ತಿದೆ. ಅದಕ್ಷರು, ಭ್ರಷ್ಟರನ್ನು ಪದವಿಯಿಂದ ಇಳಿಸಿದಾಕ್ಷಣ ಜನರು ತಮ್ಮ ಮೇಲಿನ ಆಪಾದನೆಗಳನ್ನು ಮರೆಯುತ್ತಾರೆ ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ. ಆದರೆ ಜನರು ಅದನ್ನು ಮರೆಯೋಲ್ಲ. ಬಿಜೆಪಿ ಅದಕ್ಷ ಆಡಳಿತದಿಂದ ತನ್ನ ಅಂತ್ಯವನ್ನು ತಾನೇ ಕಾಣಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಹೇಳಿದರು.
ಇಂದು ವೀರಪ್ಪ ಮೊಯ್ಲಿ ನಗರದ ಯೆನೆಪೊಯ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಆಸ್ಕರ್ ಫೆರ್ನಾಂಡಿಸ್ ಅವರೊಂದಿಗೆ 1967ರಿಂದ ನಿಕಟ ಪರಿಚಯ ಹೊಂದಿದ್ದೇನೆ. ಸರಳ, ಸಜ್ಜನಿಕೆಯ ಸ್ವಭಾವವಿರುವ ಅವರು ಕೀರ್ತಿಗಿಂತ ಹೆಚ್ಚಾಗಿ ಜನಸೇವೆಯಲ್ಲಿ ಯಾವಾಗಲೂ ತೊಡಗಿಸಿಕೊಂಡವರು. ಪಕ್ಷ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಆಸ್ಕರ್ ಬೇಗ ಗುಣಮುಖರಾಗಿ ಜನಸೇವೆಯತ್ತ ತೊಡಗಬೇಕು ಎಂದರು.
ಆಡಳಿತ ನಡೆಸುವವರಲ್ಲಿ ಅದಕ್ಷತೆ, ಭ್ರಷ್ಟಾಚಾರ ಕಂಡುಬಂದಲ್ಲಿ ಬಿಜೆಪಿಯ ಸಂಪ್ರದಾಯದಂತೆ ಅಂಥವರನ್ನು ತೆಗೆದು ಹಾಕುವ ಕ್ರಮವಿದೆ. ಕೋವಿಡ್ ವೇಳೆ ಸಮರ್ಥವಾಗಿ ಕಾರ್ಯ ನಿರ್ವಹಿಸದ ಆರೋಗ್ಯ ಸಚಿವ ಡಾ.ಹರ್ಷವರ್ಧನ್ರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲಾಯಿತು. ಐಟಿಯಲ್ಲಿ ಸಾಕಷ್ಟು ಭ್ರಷ್ಟಾಚಾರವಾದ ಹಿನ್ನೆಲೆಯಲ್ಲಿ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಕಿತ್ತು ಹಾಕಲಾಯಿತು. ಉತ್ತರಾಖಂಡ ಸಿಎಂ ಬದಲಾವಣೆಯಲ್ಲೂ ಇದೇ ಕಾರಣ ಇದೆ ಎಂದರು.
ಇದನ್ನೂ ಓದಿ: ಸಂಜೆಯೊಳಗೆ ಹೈಕಮಾಂಡ್ ಸಂದೇಶ ಬರಲಿದೆ, ಕಾದು ನೋಡಿ: ಬಿಎಸ್‌ವೈ