ಉಳ್ಳಾಲ: ಕೊರೊನಾ ಹಾವಳಿ ತಡೆಗಟ್ಟಲು ಮುಂದಾಗಿರುವ ಜನರು ಉಳ್ಳಾಲ ಜಂಕ್ಷನ್, ಕೋಟೆಪುರ ಅಳೇಕಲ, ಮಂಚಿಲ, ಮಾರ್ಗತಲೆ, ಹಳೆಕೋಟೆ ಪ್ರದೇಶಗಳಲ್ಲಿ ಗುರುವಾರ ಅಂಗಡಿ ಮುಂಗಟ್ಟುಗಳನ್ನು ತೆರೆಯದೆ ಸ್ವಯಂ ಪ್ರೇರಿತ ಬಂದ್ ನಡೆಸಿದರು.
ಉಳ್ಳಾಲ ಭಾಗಗಳಲ್ಲಿ ರಿಕ್ಷಾ ಚಾಲಕರು ಮಧ್ಯಾಹ್ನ 12.30ರವರೆಗೆ ಮಾತ್ರ ಕಾರ್ಯನಿರ್ವಹಿಸಿ ಸ್ವಯಂ ಪ್ರೇರಿತ ಬಂದ್ಗೆ ಬೆಂಬಲಿಸಿದರು. ಉಳ್ಳಾಲ ಜಮಾತ್ ವ್ಯಾಪ್ತಿಯ ವರ್ತಕರು 5 ಗಂಟೆಗೆ ವ್ಯವಹಾರ ಸ್ಥಗಿತ ಮತ್ತು ಮಾಸ್ಕ್ ರಹಿತ ಗ್ರಾಹಕರ ಜತೆ ವ್ಯವಹರಿಸದೇ ಇರುವುದು, ಐದು ಗಂಟೆಯ ನಂತರ ವಾಹನ ಸಂಚಾರ ಸ್ಥಗಿತಗೊಳಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ವಿವಿಧ ಆಡಳಿತ ಸಮಿತಿ, ಸಮಾಜ, ಅಂಗಡಿ ಮಾಲೀಕರು ಮತ್ತು ಉಳ್ಳಾಲ ನಗರಸಭೆ ಪೌರಾಯುಕ್ತ ಹಾಗೂ ಕೌನ್ಸಿಲರ್ಗಳಿಗೆ ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮನವಿ ಮಾಡಿದ್ದಾರೆ.
ಇದಕ್ಕೆ ಬಹಳಷ್ಟು ಜನರ ಸ್ಪಂದನೆ ದೊರೆತಿದ್ದು, ಕೊರೊನಾ ಬಗ್ಗೆ ಜಾಗೃತಿ ದೃಷ್ಟಿಯಿಂದ ಐದು ಗಂಟೆಯವರೆಗೆ ಮಾತ್ರ ವ್ಯವಹರಿಸಲು ಅಂಗಡಿ ಮಾಲೀಕರು ಒಪ್ಪಿಕ್ಕೊಂಡಿದ್ದಾರೆ.