ಮಂಗಳೂರು: ದಲಿತ ವ್ಯಕ್ತಿ ದಿನೇಶ್ ಕನ್ಯಾಡಿ ಹತ್ಯೆಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಎಸ್ಡಿಪಿಐ ಬೆಳ್ತಂಗಡಿಯಿಂದ ಮಂಗಳೂರುವರೆಗೆ ಬೃಹತ್ ಜಾಥಾ ನಡೆಯಿತು. ಮಂಗಳವಾರ ಬೆಳಗ್ಗೆ 9.30ಗೆ ಬೆಳ್ತಂಗಡಿಯಲ್ಲಿ ಜಾಥಾ ಆರಂಭವಾಗಿ ಸಂಜೆ 4.30 ಸುಮಾರಿಗೆ ಮಂಗಳೂರು ತಲುಪಿತ್ತು. ಆ ಬಳಿಕ ನಗರದ ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನಾ ಸಭೆ ನಡೆಯಿತು.
ಈ ಸಭೆಯನ್ನು ಉದ್ದೇಶಿಸಿ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಇಲ್ಲಿ ದಿನೇಶ್ ಕನ್ಯಾಡಿ ಎಂಬ ದಲಿತ ಯುವಕನನ್ನು ಕೊಲೆ ಮಾಡಿದ ಬಿಜೆಪಿ ಮುಖಂಡ ಕೇವಲ 15 ದಿನಗಳಲ್ಲಿ ಜಾಮೀನು ಪಡೆದು ಹೊರಗೆ ಬರುತ್ತಾರೆ. ಹಾಗಾದರೆ ಇಲ್ಲಿ ಕಾನೂನು ಇದೆಯೇ?, ಸರಕಾರ ಇದೆಯೇ?, ನ್ಯಾಯ ಇದೆಯೇ? ಎಂದು ಕೇಳಬೇಕಾಗುತ್ತದೆ.
ಶಿವಮೊಗ್ಗ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯಾದಾಗ ಎಲ್ಲಾ ಬಿಜೆಪಿ ಮುಖಂಡರು ಅವನ ಮನೆಗೆ ಹೋಗುತ್ತಾರೆ. ಸರ್ಕಾರದ ವತಿಯಿಂದ 25 ಲಕ್ಷ ರೂ. ಪರಿಹಾರ ನೀಡುತ್ತಾರೆ. ಇದು ಜನರ ತೆರಿಗೆಯ ದುಡ್ಡು. ಅದೇ ದಿನೇಶ್ ಕನ್ಯಾಡಿ ಮನೆಗೆ ಯಾವ ಮುಖಂಡರು ಹೋಗುವುದಿಲ್ಲ. ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ದೂರಿದರು.
ಸರ್ಕಾರ ನಡೆಸುವವರಿಗೆ ಎಲ್ಲರೂ ಒಂದೇ ಆಗಿರಬೇಕು. ನಿಮಗೆ ಆರೂವರೆ ಕೋಟಿ ಕನ್ನಡಿಗರು ಸಮಾನರು. ಎಲ್ಲರಿಗೆ ನ್ಯಾಯ, ರಕ್ಷಣೆ ಒದಗಿಸಬೇಕಾದುದು ನಿಮ್ಮ ಕರ್ತವ್ಯ. ಆದ್ದರಿಂದ ಈ ಪ್ರತಿಭಟನೆ ಮೂಲಕ ನಾವು ಈ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಸರ್ಕಾರಕ್ಕೆ ಬದ್ಧತೆ ಇದ್ದಲ್ಲಿ, ಹತ್ಯೆಯಾದ ದಿನೇಶ್ ಕನ್ಯಾಡಿ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ಕುಟುಂಬಕ್ಕೆ 2.50 ಎಕರೆ ಭೂಮಿ ಹಾಗೂ ಓರ್ವ ಸದಸ್ಯನಿಗೆ ಸರ್ಕಾರಿ ಕೆಲಸ ಕೊಡಬೇಕು. ತಕ್ಷಣ ಹತ್ಯೆ ಆರೋಪಿ ಕೃಷ್ಣ ಎಂಬಾತನ ಜಾಮೀನು ರದ್ದು ಮಾಡಿ ಮತ್ತೆ ಜೈಲಿಗೆ ಕಳಿಸುವಂತೆ ಆಗ್ರಹಿಸಿದರು.
ಇದನ್ನೂ ಓದಿ: ಎಸ್ಸಿ ಮೀಸಲು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸದಂತೆ ವಾಗೀಶ್ ಸ್ವಾಮಿಗೆ ವಿರೋಧ