ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ 6 ಜಿಲ್ಲೆಗಳ 287 ಶಾಲೆಗಳಿಗೆ 2,550 ಜೊತೆ ಬೆಂಚ್-ಡೆಸ್ಕ್ ಪೀಠೋಪಕರಣ ಹಸ್ತಾಂತರ ಕಾರ್ಯಕ್ರಮಕ್ಕೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ವೀರೇಂದ್ರ ಹೆಗ್ಗಡೆಯವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಶಾಲೆಗಳಿಗೆ ಪೀಠೋಪಕರಣಗನ್ನು ಕೊಡುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಪರಿಸರದ ಉಳಿವಿಗಾಗಿ ಫೈಬರ್‌ನಿಂದ ನಿರ್ಮಾಣ ಮಾಡಿದ ಬೆಂಚ್-ಡೆಸ್ಕ್‌ಗಳನ್ನು ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ ಶಾಲೆಗಳಿಗೆ ಕಳುಹಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ನೆಲದಲ್ಲಿ ಅಥವಾ ಹಳೆ ಪೀಠೋಪಕರಣದಲ್ಲಿ ಕುಳಿತುಕೊಂಡು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಒಳ್ಳೆಯ ಬೆಂಚ್, ಡೆಸ್ಕ್‌ಗಳಲ್ಲಿ ಕುಳಿತು ಅಧ್ಯಯನ ಮಾಡಬೇಕು. ಈ ನಿಟ್ಟಿನಲ್ಲಿ ಧ. ಗ್ರಾ. ಯೋಜನೆಯು ವತಿಯಿಂದ ಶಾಲೆಗಳಿಗೆ ಪೀಠೋಪಕರಣಗಳನ್ನು ಒದಗಿಸಲಾಗುತ್ತಿದೆ. ಬೆಂಚ್-ಡೆಸ್ಕ್‌ಗಳನ್ನು ಮರಕ್ಕೆ ಪರ್ಯಾಯವಾಗಿ ಫೈಬರ್‌ನಿಂದ ನಿರ್ಮಿಸಲಾಗಿದ್ದು, ದೀರ್ಘಕಾಲ ಬಾಳಿಕೆ ಬರುತ್ತದೆ. ಮರ ಉಳಿಸಿ, ದೇಶ ಉಳಿಸಿ ಅಂತಾ ನಾವು ಹೇಳುತ್ತೇವೆ. ಅದರಂತೆ ಕಾಡಿನಲ್ಲಿರುವ ಮರಗಳನ್ನು ಬಳಸಿಕೊಂಡು ಪೀಠೋಪಕರಣ ಮಾಡುವ ಬದಲು ಪರಿಸರ ಉಳಿಸಿ ಎಂಬ ಧ್ಯೇಯದೊಂದಿಗೆ ಫೈಬರ್‌ನಿಂದ ಮಾಡಲಾಗುತ್ತಿದೆ. ಎಂದು ಅವರು ಹೇಳಿದರು.
ಓದಿ: ಕಾಮಗಾರಿ ಸ್ಥಳದಲ್ಲಿ ರಸ್ತೆ ಸುರಕ್ಷತಾ ಕ್ರಮದ ಕೊರತೆ, ಸಾರ್ವಜನಿಕರ ಆಕ್ರೋಶ
ಕಳೆದ 10 ವರ್ಷಗಳಿಂದ 29 ಜಿಲ್ಲೆಗಳ 9,213 ಶಾಲೆಗಳಿಗೆ 58,91,15 ಜೊತೆ ಬೆಂಚ್-ಡೆಸ್ಕ್ ಪೂರೈಕೆ ಮಾಡಿದ್ದು, 15,92,26,000 ರೂ. ವಿನಿಯೋಗಿಸಲಾಗಿದೆ. 2,35,660 ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆಯನ್ನು ಗ್ರಾ.ಯೋಜನೆಯಿಂದ ಒದಗಿಸಲಾಗಿದೆ.