ಪುತ್ತೂರು(ದ.ಕ): ಕೋವಿಡ್ ನಿಯಂತ್ರಣಕ್ಕಾಗಿ ವ್ಯಾಕ್ಸಿನ್‌ಗಳ ಬೇಡಿಕೆ ಹೆಚ್ಚಾಗಿ ಪುತ್ತೂರಿನಲ್ಲಿ ಕಳೆದೆರಡು ದಿನಗಳಿಂದ ಲಸಿಕೆ ಕೊರತೆ ಉಂಟಾಗಿದೆ.
ಮೇ. 5ರಂದು ಪುತ್ತೂರಿಗೆ ಬಂದಿರುವ 1 ಸಾವಿರ ಲಸಿಕೆ ಅದೇ ದಿನ ಸಂಜೆಯೊಳಗೆ ಖಾಲಿಯಾಗಿದ್ದು, ಮೇ 6ರಂದು ಮತ್ತೆ ಲಸಿಕೆ ಕೊರತೆ ಎದುರಾಗಿದೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಈ ದಿನ ವ್ಯಾಕ್ಸಿನ್ ಲಭ್ಯ ಇರುವುದಿಲ್ಲ ಎಂದು ಬೋರ್ಡ್ ಹಾಕಲಾಗಿತ್ತು.
ಆದರೆ, ಮೇ 5 ಕ್ಕೆ ಸರಕಾರಿ ಆಸ್ಪತ್ರೆಗೆ 200 ಕೋವಿಡ್ ಲಸಿಕೆ ವಿತರಣೆ ಆಗಿದ್ದು, ಉಳಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ 50ರಂತೆ ಮತ್ತು ಉಪ್ಪಿನಂಗಡಿ ಮತ್ತು ಕಡಬ ಸಮುದಾಯ ಆಸ್ಪತ್ರೆಗೆ ತಲಾ 100 ಲಸಿಕೆ ವಿತರಣೆ ಆಗಿತ್ತು. ಆದರೆ, ಆ ಎಲ್ಲ ಲಸಿಕೆಗಳು ಒಂದೇ ದಿನ ಖಾಲಿಯಾಗಿದ್ದು, ಇದೀಗ ಮತ್ತೆ ಲಸಿಕೆ ಕೊರತೆ ಎದುರಾಗಿದೆ.