ಮಂಗಳೂರು: ಭಾಗವತಿಕೆ ಮಾಡದಂತೆ ರಂಗಸ್ಥಳದಿಂದ ನನ್ನನ್ನು ಇಳಿಸಿ ಅವಮಾನ ಮಾಡಿರುವ ಹಿನ್ನೆಲೆ ಕಟೀಲು ಯಕ್ಷಗಾನ ಮೇಳದ ಆಡಳಿತ ಮಂಡಳಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಕಲಾವಿದನೋರ್ವನಿಗೆ ರಂಗಸ್ಥಳದಲ್ಲಿ ಅವಮಾನ ಆಗಿದೆ. ಈ ಬಗ್ಗೆ ದ.ಕ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಮುಜುರಾಯಿ ಇಲಾಖೆಯ ಸಚಿವರಿಗೂ ದೂರು ನೀಡಿದ್ದೇನೆ. ಈ ಬಗ್ಗೆ ನಾನು ಕೋರ್ಟ್ ಮೆಟ್ಟಿಲೇರುತ್ತೇನೆ ಎಂದು ಹೇಳಿದರು.
ನನ್ನ ಹೆಸರಿಗೆ ಕಳಂಕ ತರುವ ಕೆಲಸ ಆಗುತ್ತಿದೆ. ನಾನು ಕಟೀಲು ಮೇಳದ ನಿಯಮವನ್ನು ಮೀರಿಲ್ಲ. ಒಂದು ವೇಳೆ ಮೀರಿದ್ದೇ ಆದಲ್ಲಿ ಅದನ್ನು ಸಾಕ್ಷಿ ಸಮೇತ ತೋರಿಸಲಿ. ಅಲ್ಲದೆ ಕಟೀಲು ಮೇಳದಲ್ಲಿ ಕಲಾವಿದರ ಮೇಲೆ ದಬ್ಬಾಳಿಕೆ ಆಗುತ್ತಿದೆ. ನನ್ನನ್ನು ಮೇಳದಿಂದ ತೆಗೆದು ಹಾಕಿರೋದು ತಿಳಿದೇ ಇಲ್ಲ. ಮೇಳಕ್ಕೆ ಬರಬಾರದು ಎಂದು ಮೇಳದ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಯವರು ಲಿಖಿತವಾಗಿ ಅಥವಾ ಮೌಖಿಕವಾಗಿ ಎಲ್ಲಿಯೂ ತಿಳಿಸಿಲ್ಲ. ಅಲ್ಲದೆ ಅಂದು ಭಾಗವತಿಕೆಗೆ ತೆರಳುವಾಗಲೂ ನಾನು ಅವರಲ್ಲಿ ತಿಳಿಸಿಯೇ ಹೋಗಿದ್ದೇನೆ. ರಂಗಸ್ಥಳಕ್ಕೆ ಹೋದ ತಕ್ಷಣ ಮೇಳದ ಮ್ಯಾನೇಜರ್ ಮೂಲಕ ಭಾಗವತಿಕೆ ಮಾಡಬಾರದೆಂದು ಹೇಳಿ ಕಳುಹಿಸಿದ್ದಾರೆ. ನಾನು ಏಕಾಏಕಿ ಬಂದು ಭಾಗವತಿಕೆಗೆ ಕೂತದ್ದಲ್ಲ. ಈ ಬಗ್ಗೆ ಮೇಳದ ಮ್ಯಾನೇಜರ್, ಹಿರಿಯ ಭಾಗವತರಿಗೂ ನಾನು ತಿಳಿಸಿದ್ದೇನೆ. ಇದು ನನನ್ನು ಅವಮಾನ ಮಾಡಬೇಕೆಂಬ ದುರುದ್ದೇಶದಿಂದ ಮಾಡಿದ ಕೃತ್ಯ. ಈ ಬಗ್ಗೆ ನಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಟೀಲು ಮೇಳ ಕುಟುಂಬ ಪರಂಪರೆಯಾಗಿದೆ. ಮೇಳದ ಅಧಿಕಾರ ಕಲಾವಿದ, ವೃತ್ತಿಪರ ಅನುಭವ ಹೊಂದಬೇಕೆಂಬ ಮಾನದಂಡವಿಲ್ಲ. ಆದ್ದರಿಂದ ದೊಡ್ಡ ಹುದ್ದೆಗಳೆಲ್ಲ ಅಳಿಯ, ಭಾವ, ನೆಂಟ ಈ ರೀತಿಯಲ್ಲಿ ಕೌಟುಂಬಿಕ ನೆಲೆಯಲ್ಲಿ ಹೋಗುತ್ತಿದೆ. ಕಟೀಲು ಮೇಳದ ಅವಾಂತರಗಳಿಗೆ ಮೇಳದ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಹಾಗೂ ಅವರ ಅಳಿಯ ಸುಪ್ರೀತ್ ರೈಯವರೇ ಕಾರಣ ಎಂದು ಆರೋಪಿಸಿದರು.
ಶಿಸ್ತುಪಾಲನೆಯಲ್ಲಿ ನಾನು ಎಡವಿದ್ದೇನೆ ಎಂದು ಕಟೀಲು ದೇವಳದ ಅರ್ಚಕ ಹರಿನಾರಾಯಣ ಆಸ್ರಣ್ಣರು ಆರೋಪಿಸಿದ್ದಾರೆ. ಆದರೆ ನಾನು ಎಲ್ಲಿ ಎಡವಿದ್ದೇನೆ ಎಂದು ಅವರು ಸಾಕ್ಷಿ ಸಮೇತ ಸಾಬೀತುಪಡಿಸಲಿ. ಹತ್ತೊಂಭತ್ತು ವರ್ಷದಿಂದ ಮೇಳದ ಕಲಾವಿದನಾಗಿ, ನಾನು ಮೇಳದ ಯಕ್ಷಗಾನ ಇದ್ದ ಸಂದರ್ಭ ರಜೆ ಹಾಕಿ ಬೇರೆ ಯಕ್ಷಗಾನಕ್ಕೆ ಹೋಗಿಲ್ಲ. ಹೋಗಿರುವ ಬಗ್ಗೆ ಸಾಕ್ಷಿ ಇದ್ದಲ್ಲಿ ತೋರಿಸಲಿ. ಕಟೀಲಿನಂತಹ ಪವಿತ್ರ ಸ್ಥಳದಲ್ಲಿ ನಿಂತು ಈ ರೀತಿಯ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಮೇಳಕ್ಕೆ ಹೇಳುವವರು ಕೇಳುವವರು ಇಲ್ಲದೆ ಇದ್ದರೆ ಈ ಮೇಳ ಮುಜುರಾಯಿ ಇಲಾಖೆಯ ಸುಪರ್ದಿಗೆ ಹೋಗುವುದು ಉತ್ತಮ ಎಂದು ಹೇಳಿದರು.