ಬೆಳ್ತಂಗಡಿ: ಮಂಗಳೂರಿನಲ್ಲಿ ಶಂಕಿತ ಉಗ್ರ ಶಾರೀಕ್ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ನಡೆಸಿದ ಹಿಂದಿನ ದಿನ ಬೆಳ್ತಂಗಡಿಯ ಬೆಂದ್ರಾಳದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಕರೆ ಹೋಗಿರುವುದು ಬೆಳಕಿಗೆ ಬಂದಿದೆ. ಧರ್ಮಸ್ಥಳ ಪೊಲೀಸರು ಬೆಂದ್ರಾಳ ಪ್ರದೇಶದಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ಸ್ಥಳೀಯರಿಂದ ಮಾಹಿತಿ ಸಂಗ್ರಹ: ಧರ್ಮಸ್ಥಳ ಪೊಲೀಸರು ಹಾಗೂ ಮಂಗಳೂರು ಆಂತರಿಕ ಭದ್ರತಾ ಇಲಾಖೆಯ ಇನ್ಸ್ಪೆೆಕ್ಟರ್ ಚಿದಾನಂದ ಮತ್ತು ತಂಡ ಶುಕ್ರವಾರ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಬೆಂದ್ರಾಳ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇಂದು ಮತ್ತೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಡಿ ಮತ್ತು ತಂಡ ತೋಟತ್ತಾಡಿ ಗ್ರಾಮದ ಬಾರೆಮನೆ ನಿವಾಸಿಗಳಾದ ರುಕ್ಮಯ ಗೌಡ ಮನೆ ಮತ್ತು ಚೆಲುವಮ್ಮ ಎಂಬುವವರ ಮನೆಯಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ.
ಬೆಂದ್ರಾಳ ಸುತ್ತಮುತ್ತಲಿನ ಸುಮಾರು 5 ಕಿ.ಮೀ ಅರಣ್ಯ ಪ್ರದೇಶದೊಳಗೆ ಹುಡುಕಾಟ ನಡೆಸಿ ನಂತರ ಸ್ಯಾಟಲೈಟ್ ಕರೆ ಹೋದ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ನ.18 ರಂದು ನಿಷೇಧಿತ ಸ್ಯಾಟಲೈಟ್ ಫೋನ್ ಕರೆ ಹೋಗಿರುವ ಬಗ್ಗೆ ಕೇಂದ್ರ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (RAW) ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ. ಆಂತರಿಕ ಭದ್ರತಾ ಇಲಾಖೆ ಹಾಗೂ ಸ್ಥಳೀಯ ಪೊಲೀಸರಿಗೆ ತನಿಖೆ ಮಾಡಲು ಮಾಹಿತಿ ರವಾನಿಸಿದ್ದಾರೆ.
ಸ್ಯಾಟಲೈಟ್ ಕರೆ ಹೋದ ಪ್ರದೇಶಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಡಿ ನೇತೃತ್ವದಲ್ಲಿ ಸಿಬ್ಬಂದಿ ಮಹಮ್ಮದ್ ಅಸ್ಲಾಂ, ಪ್ರಶಾಂತ್, ರಾಜೇಶ್ ತೆರಳಿ ತನಿಖೆ ನಡೆಸಿದ್ದಾರೆ. ಇವರಿಗೆ ಸ್ಥಳೀಯರಾದ ಮೋಹನ್ ಗೌಡ, ಉಮೇಶ್.ಬಿ, ಸತೀಶ್ ಬಳ್ಳಿ ಹಾಗೂ ಕಾರ್ತಿಕ್ ಸಹಕರಿಸಿದ್ದಾರೆ.
ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಶಾರೀಕ್ನನ್ನು ನಾವು ವಿಚಾರಣೆ ಮಾಡಿಲ್ಲ.. ಕಮಿಷನರ್ ಶಶಿಕುಮಾರ್