ಮಂಗಳೂರು: ಪರವಾನಿಗೆ ಇಲ್ಲದೆ ಖಾಸಗಿ ಸ್ಥಳದಲ್ಲಿ ಸಂಗ್ರಹಿಸಲಾಗಿದ್ದ 5.60 ಲಕ್ಷ ರೂ. ಮೌಲ್ಯದ 800 ಮೆಟ್ರಿಕ್ ಟನ್ ಅಕ್ರಮ ಮರಳನ್ನು ಮಂಗಳೂರು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ರಂಜಿತ್‌ಕುಮಾರ್ ನೇತೃತ್ವದ ಪೊಲೀಸರ ತಂಡ ಟಿಪ್ಪರ್‌ನ್ನು ಬೆನ್ನಟ್ಟಿದೆ. ಈ ವಾಹನವು ಕೇರಳದ ಕಾಸರಗೋಡಿನ ವರ್ಕಾಡಿ ಗ್ರಾಮದ ತಲಕ್ಕಿ ಎಂಬಲ್ಲಿನ ಖಾಸಗಿ ಜಾಗದಲ್ಲಿರುವ ಮರಳು ಸಂಗ್ರಹ ಸ್ಥಳಕ್ಕೆ ತಲುಪಿದೆ. ತಕ್ಷಣ ದಾಳಿ ನಡೆಸಿದ ಪೊಲೀಸರು 5.60 ಲಕ್ಷ ರೂ. ಮೌಲ್ಯದ 800 ಮೆಟ್ರಿಕ್ ಟನ್ ಮರಳಅನ್ನು ವಶಪಡಿಸಿಕೊಂಡಿದ್ದಾರೆ.
ಈ ಜಾಗವು ತಲಕ್ಕಿ ರಫೀಕ್ ಎಂಬಾತನಿಗೆ ಸೇರಿದ್ದು, ಆತನ ಬಳಿ ಮರಳು ಸಂಗ್ರಹದ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೆ ಇರುವುದು ತಿಳಿದುಬಂದಿದೆ. ಮರಳನ್ನು ಕರ್ನಾಟಕದಿಂದ ಅಕ್ರಮವಾಗಿ ಕೇರಳದ ಕಾಸರಗೋಡಿಗೆ ಸಾಗಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿರುವ ದ.ಕ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮರಳನ್ನು ಪರಿಶೀಲನೆ ನಡೆಸಿ, ಅದು ನೇತ್ರಾವತಿ ನದಿಯಿಂದಲೇ ತೆಗೆದಿದ್ದು ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಸ್ವಾಧೀನಪಡಿಸಿಕೊಳ್ಳಲಾದ ಮರಳನ್ನು ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.