ಮಂಗಳೂರು: ಆಳ ಸಮುದ್ರ ಮೀನುಗಾರಿಕೆ ನಡೆಸಲು ವಾರನುಗಟ್ಟಲೆ ಸಮುದ್ರದಲ್ಲಿಯೇ ಇರುವ ಮೀನುಗಾರರು ಶುದ್ಧ ಕುಡಿಯುವ ನೀರನ್ನು ತಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ. ಇದು ಬೋಟ್ಗೆ ಹೊರೆಯೂ ಹೌದು. ಅಲ್ಲದೆ, ಸಾಕಷ್ಟು ಸ್ಥಳವೂ ವ್ಯರ್ಥವಾಗುತ್ತದೆ. ಅದಕ್ಕಾಗಿಯೇ ಸಮುದ್ರದ ಉಪ್ಪು ನೀರನ್ನೇ ಕುಡಿಯಲು ಯೋಗ್ಯವಾದ ಶುದ್ಧ ನೀರನ್ನಾಗಿ ಪರಿವರ್ತಿಸುವ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ದೇಶದಲ್ಲಿಯೇ ಇಂತಹದ್ದೊಂದು ಪ್ರಯೋಗ ಪ್ರಪ್ರಥಮ ಬಾರಿಗೆ ಮಂಗಳೂರಿನಲ್ಲಿ ನಡೆದಿದೆ. ಇನ್ನು ಮುಂದೆ ತಮ್ಮ ನಿತ್ಯಾವಶ್ಯಕತೆಯ ನೀರನ್ನು ತಮ್ಮೊಂದಿಗೆ ಒಯ್ಯಬೇಕೆಂದೇ ಇಲ್ಲ. ಈ ವಿನೂತನ ತಂತ್ರಜ್ಞಾನದಿಂದ ಸಮುದ್ರದ ಉಪ್ಪು ನೀರನ್ನು ಸಿಹಿನೀರಾಗಿ ಪರಿವರ್ತಿಸಬಹುದು. ಈ ಮೂಲಕ ಮೀನುಗಾರರು ತಮ್ಮ ನಿತ್ಯಾವಶ್ಯಕತೆಯ ನೀರಿನ ಬಗ್ಗೆ ಚಿಂತೆಯಿಲ್ಲದೆ ಮೀನುಗಾರಿಕೆ ನಡೆಸಬಹುದು.
ಏನಿದು ತಂತ್ರಜ್ಞಾನ?
ಆಸ್ಟ್ರೇಲಿಯಾದ ರೇಯನ್ಸ್ ರೈನ್ ಮ್ಯಾನ್ ಕಂಪೆನಿಯು ಈ ಉಪಕರಣವನ್ನು ಅಭಿವೃದ್ಧಿಪಡಿಸಿದೆ. ಇದನ್ನು ಮೊಟ್ಟಮೊದಲ ಬಾರಿಗೆ ಮಂಗಳೂರಿನ ಬೋಟ್ ಒಂದಕ್ಕೆ ಅಳವಡಿಕೆ ಮಾಡಲಾಗಿದೆ. ಈ ಉಪಕರಣದಲ್ಲಿ ಎರಡು ಪೈಪ್ಗಳಿವೆ. ಒಂದು ಪೈಪ್ ಸಮುದ್ರದ ಉಪ್ಪುನೀರನ್ನು ಹೀರಿಕೊಳ್ಳುತ್ತದೆ. ಈ ಉಪ್ಪು ನೀರು ಉಪಕರಣದೊಳಗೆ ಶುದ್ಧವಾಗುತ್ತದೆ. ಬಳಿಕ ಮತ್ತೊಂದು ಪೈಪ್ ಮೂಲಕ ಶುದ್ಧ ನೀರು ಬರುತ್ತದೆ.
ಒಂದು ಬೋಟ್ ಆಳ ಸಮುದ್ರ ಮೀನುಗಾರಿಕೆ ನಡೆಸಲು ಹೋಗುವ ಸಂದರ್ಭ ಸುಮಾರು 6ಸಾವಿರ ಲೀಟರ್ ನೀರನ್ನು ತಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ. ಇದರ ಹೊರೆಯೂ ಬೋಟ್ಗೆ ಇರುತ್ತದೆ. ಅಲ್ಲದೆ ನೀರು ಶೇಖರಣೆ ಮಾಡಲು ಬೇಕಾದ ಅಷ್ಟು ಜಾಗವೂ ಬೋಟ್‌ನಲ್ಲಿ ದೊರೆಯುತ್ತದೆ.
ದಿನಕ್ಕೆ 2 ಸಾವಿರ ಲೀಟರ್ ಶುದ್ಧ ನೀರು ಉತ್ಪಾದನೆ
ಈ ಉಪಕರಣದಲ್ಲಿ ದಿನಕ್ಕೆ 2 ಸಾವಿರ ಲೀಟರ್ ಶುದ್ಧ ನೀರು ಉತ್ಪಾದಿಸಲು ಸಾಧ್ಯ. ಈ ಮೂಲಕ ಒಂದು ಬೋಟ್‌ನಲ್ಲಿ ಸುಮಾರು 60 ಸಾವಿರ ಲೀಟರ್ ಶುದ್ಧ ನೀರು ಉಳಿಸಲು ಸಾಧ್ಯವಾಗುತ್ತದೆ. ಈ ಉಪಕರಣಕ್ಕೆ 4.60 ಲಕ್ಷ ರೂ. ದರ ಇದ್ದು, 50 ಶೇ. ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ. ಯುರೋಪ್ನ 160 ರಾಷ್ಟ್ರಗಳಲ್ಲಿನ ಮೀನುಗಾರಿಕೆಯಲ್ಲಿ ಈ ವಿನೂತನ ತಂತ್ರಜ್ಞಾನ ಯಶಸ್ವಿಯಾಗಿದೆ.
ಈಗಾಗಲೇ ಇದನ್ನು ಪ್ರಯೋಗ ಶಾಲೆಯಲ್ಲಿ ತಪಾಸಣೆ ನಡೆಸಿ ಕುಡಿಯಲು ಯೋಗ್ಯವಾಗಿದೆ ಎಂದು ವರದಿಯೂ ಬಂದಿದೆ. ಇಂದು ಮೀನುಗಾರಿಕೆ ಹಾಗೂ ಬಂದರು ಸಚಿವ ಎಸ್.ಅಂಗಾರ ಅವರು ಈ ತಂತ್ರಜ್ಞಾನವನ್ನು ವೀಕ್ಷಿಸಿ ನೀರನ್ನು ಕುಡಿದು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ರಾಜ್ಯಮಟ್ಟದ 'ಉತ್ತಮ ಶಿಕ್ಷಕರ ಪ್ರಶಸ್ತಿ' ಪಟ್ಟಿ ಪ್ರಕಟ: ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಹೆಸರು ಇಲ್ಲಿದೆ..