ಮಂಗಳೂರು: ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಹಾಗು ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮೆಡಿಕಲ್ ವಿದ್ಯಾರ್ಥಿಸಹಿತ ಮೂರು ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಮತ್ತು ಮಂಗಳೂರು ಸಿಸಿಬಿ ಘಟಕದ ಅಧಿಕಾರಿ, ಸಿಬ್ಬಂದಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದು, 1,40,000 ರೂ ಮೌಲ್ಯದ 5 ಕೆಜಿ 400 ಗ್ರಾಂ ಗಾಂಜಾ ಹಾಗೂ 4 ಮೊಬೈಲ್ ಫೋನ್ ಗಳನ್ನು ಮತ್ತು 1 ಟ್ಯಾಬ್ ವಶಪಡಿಸಿಕೊಳ್ಳಲಾಗಿದೆ.
ಬೀದರ್ ನಿವಾಸಿ ಸದ್ಯ ನಗರದ ಗೋರಿಗುಡ್ಡೆಯಲ್ಲಿ ವಾಸವಿರುವ ಪ್ರಜ್ವಲ್ ಫಿನಹಾಸ್(26), ಮೂಲತ: ಹಾಸನ ಜಿಲ್ಲೆಯ ಸದ್ಯ ನಗರದ ಕುಲಶೇಖರದ ಅಪಾರ್ಟ್ಮೆಂಟ್‌ನಲ್ಲಿ ಇರುವ ಧ್ರುವ ಶೆಟ್ಟಿ (19) , ನಗರದ ಕುಳಾಯಿ ನಿವಾಸಿ ಶಿವಾನಿ (22) ಬಂಧಿತರು.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪಿಎಸ್‌ಐ ಶೀತಲ್ ಅಲಗೂರು ಅವರಿಗೆ ಬಂದ ಮಾಹಿತಿ ಮೇರೆಗೆ ಆರೋಪಿ ಪ್ರಜ್ವಲ್ ಫಿನಹಾಸ್ನನ್ನು ಬಂಧಿಸಿ ಆತನ ನೀಡಿದ ಮಾಹಿತಿ ಮೇರೆಗೆ ಉಳಿದ ಆರೋಪಿಗಳನ್ನು ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿ ಬಂಧಿಸಿದ್ದರು. ಆರೋಪಿಗಳ ಪೈಕಿ ಪ್ರಜ್ವಲ್ ಫಿನಹಾಸ್ ಎಂಬಾತ ಮಹಾರಾಷ್ಟ್ರ ರಾಜ್ಯದಿಂದ ಗಾಂಜಾ ಖರೀದಿಸಿ ಮಂಗಳೂರಿನಲ್ಲಿ ಆತನ ಸ್ನೇಹಿತ ಧ್ರುವ ಶೆಟ್ಟಿ ಮತ್ತು ಶಿವಾನಿಗೆ ನೀಡಿ ಅವರ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದನು.
ಈ ಕುರಿತಾಗಿ ಆರೋಪಿಗಳ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಪೈಕಿ ಪ್ರಜ್ವಲ್ ಫಿನಹಾಸ್ ಎಂಬಾತನ ವಿರುದ್ಧ ಈ ಹಿಂದೆ ಸೆನ್ ಪೊಲೀಸ್ ಠಾಣೆಯಲ್ಲಿ ಎಂಡಿಎಂಎ ಮತ್ತು ಗಾಂಜಾ ಸಾಗಾಟಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದು ದಾಖಲಾಗಿದೆ.
ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗ್ಡೆ, ಪೊಲೀಸ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್, ಹೆಚ್ ಎಂ, ಪಿಎಸ್‌ಐ ರಾಜೇಂದ್ರ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪಿಎಸ್‌ಐ ಶೀತಲ್ ಅಲಗೂರು, ಪಿಎಸ್‌ಐ ಜ್ಯೋತಿ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಸಿಬ್ಬಂದಿಯವರು ಮತ್ತು ಸಿಸಿಬಿ ಘಟಕದ ಸಿಬ್ಬಂದಿ ಪಾಲ್ಗೊಂಡಿದ್ದರು.
ಇದನ್ನೂಓದಿ: ಪ್ರತಿಷ್ಟಿತ ಬ್ರ್ಯಾಂಡ್ ಹೆಸರಲ್ಲಿ 10 ವರ್ಷದಿಂದ ನಕಲಿ ಪೇಂಟ್ ಮಾರಾಟ; ಆರೋಪಿ ಬಂಧನ