ಪುತ್ತೂರು: ರೈಲು ನಿಲ್ದಾಣದ ಬಳಿಯಿರುವ ಕಾರ್ಣಿಕ ಕ್ಷೇತ್ರ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ನಿನ್ನೆ ಸಂಜೆ ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಠಾಕೋರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ವಿಟ್ಲದಲ್ಲಿಂದು ನಡೆಯಬೇಕಾಗಿದ್ದ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣಕ್ಕಾಗಿ ಸಾಧ್ವಿ ಪ್ರಜ್ಞಾಸಿಂಗ್ ಆಗಮಿಸಿದ್ದರು. ಆದರೆ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಕಾರ್ಯಕ್ರಮ ರದ್ದಾಗಿದೆ. ಹಾಗಾಗಿ ಶನಿವಾರ ಸಂಜೆ ವೇಳೆಗೆ ಲಕ್ಷ್ಮೀ ದೇವಿ ಬೆಟ್ಟದ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ಅವರು ಸಂಸದರನ್ನು ಬರಮಾಡಿಕೊಂಡರು. ಬಳಿಕ ಸಾಧ್ವಿಯವರು ಆರತಿಯೆತ್ತಿ ಮಹಾಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸಿದರು.
ನಂತರ ಧರ್ಮದರ್ಶಿ ಐತ್ತಪ್ಪ ಸಪಲ್ಯ ಅವರು ಸಾಧ್ವಿಗೆ ಶಾಲು ಹೊದಿಸಿ, ಫಲಪುಷ್ಪ ಹಾಗೂ ದೇವರ ಪ್ರಸಾದ ನೀಡಿ ಗೌರವಿಸಿದರು. ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ಪುತ್ತೂರು ಪ್ರಖಂಡದ ಅಧ್ಯಕ್ಷ ಜನಾರ್ದನ ಬೆಟ್ಟ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಬೆಟ್ಟ, ಲಕ್ಷ್ಮೀಪ್ರಸಾದ್ ಬೆಟ್ಟ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಜಯಂತಿ, ಹರಿಪ್ರಸಾದ್ ನೆಲ್ಲಿಕಟ್ಟೆ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.