ಮಂಗಳೂರು : ಬಜಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವುದನ್ನು ಭದ್ರತಾ ಲೋಪ ಎನ್ನಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಯಾವುದೋ ಮಾನಸಿಕ ವ್ಯತ್ಯಾಸ ಆಗಿರುವಂತಹ ವ್ಯಕ್ತಿ ಬಾಂಬ್ ಇಟ್ಟಿದ್ದಾರೆ ಎಂಬುದನ್ನು ಭದ್ರತಾ ವೈಫಲ್ಯ ಎನ್ನಲು ಸಾಧ್ಯವಿಲ್ಲ. ಬಾಂಬ್ ಇದೆ ಎಂಬ ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ತುರ್ತು ಕ್ರಮಕೈಗೊಂಡು ಸಕಾಲದಲ್ಲಿ ಟ್ರೇಸ್ ಮಾಡಿದ್ದಾರೆ. ಈ ಪ್ರಕರಣದಿಂದ ಜವಾಬ್ದಾರಿಗಳು ಹೆಚ್ಚಾಗಿವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪೊಲೀಸ್ ಭದ್ರತೆ ನೀಡಲು ಸಾಧ್ಯವಾಗುತ್ತದೆ. ಯಾರೂ ಭಯಪಡುವ ಅಗತ್ಯ ಇಲ್ಲ. ರಾಜ್ಯ ಹಾಗೂ ದೇಶದ ಪೊಲೀಸರ ಮೇಲೆ ಇನ್ನೂ ಹೆಚ್ಚಾಗಿ ನಂಬಿಕೆ ಇಡಬಹುದು ಎಂದರು.
ಮಠಂತಬೆಟ್ಟು ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆ ಹಿತ್ಲು, ಆಡಳಿತ ಮೊಕ್ತೇಸರ ನಿರಂಜನ ರೈ ಮಠಂತಬೆಟ್ಟು, ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಾನಂದ ಕೊಡಿ ಉಪಸ್ಥಿತರಿದ್ದರು.