ಮಂಗಳೂರು: ನೈತಿಕ ಪೊಲೀಸ್ ಗಿರಿ ಯಾರೇ ಮಾಡಿದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಯಾರೂ ಕಾನೂನು ಕೈಗೆ ತೆಗೆದುಕೊಳ್ಳಲು ಅವಕಾಶವಿಲ್ಲ. ಯಾರೇ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರಕಾರ ಇದೀಗ ಆರಂಭಿಕ ಸಮಸ್ಯೆಯಲ್ಲಿದೆ. ಕಾನೂನು ಕೈಗೆತ್ತಿಕೊಳ್ಳುವ ಯಾರಿಗೂ ಪೊಲೀಸರು ಅವಕಾಶ ನೀಡುವುದಿಲ್ಲ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಯಾರು ಕೂಡ ಸರಕಾರದ, ವ್ಯಕ್ತಿಗಳ ವಿರುದ್ಧ ಸುಳ್ಳು ಸುದ್ದಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಏನು ಬೇಕಾದರೂ ಹೇಳುವಂತಿಲ್ಲ. ಟೀಕೆ ಬೇರೆ, ಸುಳ್ಳು ಸುದ್ದಿ ಹಬ್ಬಿಸುವುದು ಬೇರೆ, ವೈಯಕ್ತಿಕ ತೇಜೋವಧೆ ಮಾಡುವುದು ಬೇರೆ. ಸುಳ್ಳು ಸುದ್ದಿ, ವೈಯುಕ್ತಿಕ ತೇಜೋವಧೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಡುಪಿ ಕಾಲೇಜು ವಿದ್ಯಾರ್ಥಿನಿಯರು ವಾಷ್ ರೂಂನಲ್ಲಿ ಮೊಬೈಲ್ ಫೋನ್ ಇಟ್ಟ ಪ್ರಕರಣದಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಡಿವೈಎಸ್ಪಿ ತನಿಖೆ ನಡೆಸುತ್ತಿದ್ದಾರೆ. ಎಸ್ಐಟಿ ತನಿಖೆ ಉದ್ಭವವಾಗಲ್ಲ ಎಂದರು. ಸೌಜನ್ಯ ಪ್ರಕರಣ ಮರುತನಿಖೆ ಮಾಡುವ ವಿಚಾರದಲ್ಲಿ ಅವರ ಹೆತ್ತವರು ಮನವಿ ನೀಡಿದ್ದಾರೆ. ಕಾನೂನು ವಿಚಾರ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಜಡ್ಜ್ಮೆಂಟ್ ಪ್ರತಿ ಓದಿದ ಬಳಿಕ ನಿರ್ಧರಿಸಲಾಗುವುದು ಎಂದರು.
ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಯುತ್ತಿದೆ. ತನಿಖೆಯ ಪ್ರಗತಿಯ ಬಗ್ಗೆ ಪರಿಶೀಲಿಸಲಾಗುವುದು. ಕಸ್ತೂರಿ ರಂಗನ್ ವರದಿ ಕೇಂದ್ರ ಸರಕಾರದ್ದು. ಪರಿಸರ ಸಂರಕ್ಷಣೆ ಮಾಡುವುದು ಗೊತ್ತಿದೆ. ಅದನ್ನು ಕೇಂದ್ರ ಸರಕಾರ ನಿರ್ಧಾರ ಮಾಡಲಿ ಎಂದು ಹೇಳಿದ್ದಾರೆ.
ನೈತಿಕ ಪೊಲೀಸ್ ಗಿರಿ ನಡೆಸಿದವರು ಗಡಿಪಾರು- ಸಚಿವ ದಿನೇಶ್ ಗುಂಡೂರಾವ್: ನೈತಿಕ ಪೊಲೀಸ್ ಗಿರಿ ಮೂಲಕ ಕಾನೂನು ಕೈಗೆತ್ತಿಕೊಳ್ಳುವಂತಹವರನ್ನು ಗಡಿಪಾರು ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಭೀತಿ ಸೃಷ್ಟಿ ಮಾಡುವವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತಾರೆ. ಈ ವಿಚಾರದಲ್ಲಿ ಸಹನೆ ಇಲ್ಲ, ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಉದ್ದೇಶಪೂರ್ವಕವಾಗಿ ಜಿಲ್ಲೆಗೆ ಕೆಟ್ಟ ಹೆಸರು ತರುವ ಉದ್ದೇಶ ಇವರದು. ಜಿಲ್ಲೆಗೆ ಬೇರೆ ಕಡೆಗಳಿಂದ ವಿದ್ಯಾರ್ಥಿಗಳು ಬರಲು ಭಯಪಡುತ್ತಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆ ಕೆಟ್ಟ ಹೆಸರು ತರಲು ಮತೀಯವಾದ ಮಾಡುತ್ತಿದ್ದಾರೆ. ಇವರು ಜಿಲ್ಲೆಯ ಅಭಿವೃದ್ಧಿ ಆಗದಂತೆ ತಡೆಯುತ್ತಿದ್ದಾರೆ. ಆ್ಯಂಟಿ ಕಮ್ಯೂನಲ್ ವಿಂಗ್ ಮೂಲಕ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಂತಹವರನ್ನು ಗಡಿಪಾರು ಮಾಡುತ್ತೇವೆ. ಬಿಜೆಪಿ ಕ್ರಿಮಿನಲ್ ಸಪೋರ್ಟ್ ಮಾಡುವ ಪಕ್ಷವಾಗಿದೆ. ಬಿಜೆಪಿ ಜಿಲ್ಲೆಯ ಗೌರವ ಉಳಿಸಲಿ ಎಂದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ ತಯಾರಿ ಹಿನ್ನೆಲೆ ವರಿಷ್ಠರ ಜೊತೆ ದೆಹಲಿಯಲ್ಲಿ ಸಭೆ, 50 ಕೈ ನಾಯಕರ ಭೇಟಿ: ಡಿ ಕೆ ಶಿವಕುಮಾರ್