ಮಂಗಳೂರು : ಕೇರಳ ರಾಜ್ಯದಲ್ಲಿ ಕೋವಿಡ್ ಜೊತೆ ಝಿಕಾ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ದ.ಕ ಜಿಲ್ಲೆಯಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಕೇರಳದಿಂದ ಜಿಲ್ಲೆಗೆ ಬರುವವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಕೇರಳದಿಂದ ಬರುವ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತಿದೆ.
ಪ್ರಯಾಣಿಕರು ಆರ್ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೆಟ್ ಅಥವಾ ಕೊರೊನಾ ಲಸಿಕೆ ತೆಗೆದುಕೊಂಡ ಸರ್ಟಿಫಿಕೆಟ್ ಅನ್ನು ರೈಲ್ವೆ ನಿಲ್ದಾಣದ ಚೆಕ್ ಪೋಸ್ಟ್ನಲ್ಲಿ ತೋರಿಸಬೇಕು. ಇದ್ಯಾವುದು ಇಲ್ಲದವರಿಗೆ ಸ್ಥಳದಲ್ಲಿ ಆರ್ಟಿಪಿಸಿಆರ್ ತಪಾಸಣೆ ವ್ಯವಸ್ಥೆ ಮಾಡಲಾಗಿದೆ.
ಕೇರಳದಿಂದ ಮಂಗಳೂರಿಗೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ಹೋಗುತ್ತಿರುತ್ತಾರೆ. ವಾಹನದ ಮೂಲಕ ಬಂದು ಹೋಗುವಷ್ಟೇ ರೈಲಿನ ಮೂಲಕವು ಪ್ರಯಾಣಿಕರು ಆಗಮಿಸುತ್ತಾರೆ.
ಕೇರಳ ಮತ್ತು ದಕ್ಷಿಣ ಕನ್ನಡ ಗಡಿಭಾಗದಲ್ಲಿ ಕೇರಳದ ಪ್ರಯಾಣಿಕರನ್ನು ಕಳೆದ ಹಲವು ದಿನಗಳಿಂದ ತಪಾಸಣೆ ಮಾಡಲಾಗುತ್ತಿದ್ದರೂ, ರೈಲಿನಲ್ಲಿ ಬರುವವರಿಗೆ ಮಾತ್ರ ಈವರೆಗೆ ತಪಾಸಣೆ ನಡೆಸಲಾಗುತ್ತಿರಲಿಲ್ಲ.
ಓದಿ : ಗರ್ಭಿಣಿಯರಿಗೆ ಝಿಕಾ ಸೋಂಕು ತಗುಲಿದರೆ ಹುಟ್ಟುವ ಮಗುವಿಗೆ ಅಪಾಯ: ದ.ಕನ್ನಡ ಡಿಹೆಚ್ಒ
ಇದೀಗ ರೈಲ್ವೆ ನಿಲ್ದಾಣದಲ್ಲೂ ತಪಾಸಣೆ ಆರಂಭವಾಗಿದೆ. ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ಮತ್ತು ಕಂಕನಾಡಿಯಲ್ಲಿರುವ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಚೆಕ್ ಪೋಸ್ಟ್ ತೆರೆದು ತಪಾಸಣೆ ನಡೆಸಲಾಗುತ್ತಿದೆ. ಮಂಗಳೂರು ರೈಲ್ವೆ ಪೊಲೀಸರು, ಆರೋಗ್ಯ ಇಲಾಖೆಯ ಕಾರ್ಯಕರ್ತರು ಮತ್ತು ಮಂಗಳೂರು ನಗರ ಪೊಲೀಸರು ಚೆಕ್ ಪೋಸ್ಟ್ನಲ್ಲಿ ದಾಖಲೆಗಳ ತಪಾಸಣೆಯಲ್ಲಿ ತೊಡಗಿದ್ದಾರೆ.