ಮಂಗಳೂರು: ನಕಲಿ ಬಿಲ್ ತಯಾರಿಸಿ ಸರ್ಕಾರಕ್ಕೆ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸದೇ 83 ಕೋಟಿ ರೂ.ಗಳಷ್ಟು ವಂಚನೆ ಎಸಗಿದ್ದಾರೆಂದು ಆರೋಪಿಸಿ ಮಂಗಳೂರಿನ ಕೇಂದ್ರೀಯ ಜಿಎಸ್‌ಟಿ ಕಮಿಷನರೇಟ್ ಈ ಸಂಬಂಧ ಇಬ್ಬರನ್ನು ಬಂಧಿಸಿದೆ.
ಮಂಗಳೂರಿನ ಗುಜರಿ ವ್ಯಾಪಾರಿ ಮೆ. ತೌಹೀದ್ ಸ್ಕ್ರೇಪ್ ಡೀಲರ್‌ನ ಪಿ.ಕೆ. ಅಬ್ದುಲ್ ರಹೀಂ ಮತ್ತು ಮೆ. ಎಂ.ಕೆ. ಟ್ರೇಡರ್ಸ್‌ನ ಮಾಲೀಕ ಅಬ್ದುಲ್ ಖಾದರ್ ಕೂಳೂರು ಚಾಯಬ್ಬ ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮೆ ತೌಹೀದ್ ಸ್ಕ್ರೇಪ್ ಡೀಲರ್ ಮತ್ತು ಮೆ ಎಂ.ಕೆ. ಟ್ರೇಡರ್ಸ್ ಸಂಸ್ಥೆಗಳು ಬೇರೆ ಬೇರೆ ಸಂಸ್ಥೆಗಳಿಂದ ಸರಕು ಸಾಗಾಟಕ್ಕೆ ಸಂಬಂಧಿಸಿದಂತೆ ನಕಲಿ ಬಿಲ್‌ಗಳನ್ನು (ಇನ್‌ವಾಯ್ಸ್) ತಯಾರಿಸಿ ಅದರ ಆಧಾರದಲ್ಲಿ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದು ಸರ್ಕಾರಕ್ಕೆ ವಂಚಿಸುತ್ತಿದ್ದವು. ಹಾಗಾಗಿ ಇಲ್ಲಿ ನಿಜವಾಗಿಯೂ ಸರಕು ಸಾಗಾಟ ಆಗುತ್ತಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.
ಈ ನಕಲಿ ಐಟಿಸಿಗಳನ್ನು ಈ ಸಂಸ್ಥೆಗಳ ಮಾಲೀಕರು ನೋಂದಣಿ ರಹಿತ ವ್ಯಾಪಾರಿಗಳಿಂದ ಖರೀದಿಸಿದ ಗುಜರಿ ಸಾಮಾಗ್ರಿಗಳನ್ನು ಅಲ್ಯೂಮಿನಿಯಂ ಎಂಎಸ್ ಕಾಪರ್ ರಾಡ್ಸ್, ಇಂಗೊಟ್ಸ್ ಕಾಸ್ಟಿಂಗ್ಸ್ ಮತ್ತಿತರ ಸಾಮಗ್ರಿಗಳ ತಯಾರಿಕಾ ಸಂಸ್ಥೆಗಳಿಗೆ ಪೂರೈಕೆ ಮಾಡುವ ಸಂದರ್ಭದಲ್ಲಿ ಜಿಎಸ್‌ಟಿ ಪಾವತಿಯಿಂದ ತಪ್ಪಿಸಿಕೊಳ್ಳಲು ಉಪಯೋಗಿಸುತ್ತಿದ್ದರು ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.
ಅಲ್ಲದೆ ಅವರು ನಕಲಿ ಬಿಲ್ ಹೊಂದಿದವರಿಗೆ ನಕಲಿ ಐಟಿಸಿ ಕ್ರೆಡಿಟ್ ವರ್ಗಾವಣೆ ಮಾಡಲು ಕೂಡಾ ಈ ನಕಲಿ ಬಿಲ್‌ಗಳನ್ನು ಉಪಯೋಗಿಸುತ್ತಿದ್ದರು ಎಂದು ಗೊತ್ತಾಗಿದೆ. ಅಲ್ಲದೆ ಆರೋಪಿಗಳು ನಕಲಿ ಬಿಲ್ ತಯಾರಿಸುವ ವ್ಯಕ್ತಿಗೆ ಶೇ. 3ರಷ್ಟು ಕಮಿಷನ್ ಪಾವತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಎರಡೂ ಸಂಸ್ಥೆಗಳು ಒಟ್ಟು 15 ಕೋಟಿ ರೂ. ಮೊತ್ತದ ನಕಲಿ ಬಿಲ್ ಬಳಕೆ ಮಾಡಿದ್ದು, ಒಟ್ಟು 83 ಕೋಟಿ ರೂ. ಮೊತ್ತದ ಸರಕು ಇದರಲ್ಲಿ ಒಳಗೊಂಡಿದೆ ಎಂದು ಕೇಂದ್ರೀಯ ಜಿಎಸ್‌ಟಿ ಕಮಿಷನರ್ ಧರ್ಮ ಸಿಂಗ್ ಅವರ ಪ್ರಕಟಣೆ ತಿಳಿಸಿದೆ.