ಮಂಗಳೂರು: ರೈಲು ಪ್ರಯಾಣಿಕರ ಮೊಬೈಲ್ ಫೋನ್ ಮತ್ತು ಹ್ಯಾಂಡ್ ಬ್ಯಾಗ್‌ಗಳನ್ನು ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಂಕಣ ರೈಲ್ವೆ ನಿಗಮದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಬಂಧಿಸಿದೆ.
ಕೇರಳದ ಕಣ್ಣೂರ್ ನಿವಾಸಿಗಳಾದ ಶಫೀಕ್ ಮತ್ತು ಸಿ.ಪಿ.ಸಿಯಾದ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ 3 ಮೊಬೈಲ್ ಫೋನ್, ₹ 10,500 ನಗದು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ತಿರುವನಂತಪುರಂ-ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರನ್ನು ಟಾರ್ಗೆಟ್ ಮಾಡುತ್ತಿದ್ದರು. ಬುಧವಾರ ತಿರುವನಂತಪುರಂನಿಂದ ಕೋಟಕ್ಗೆ ‘ಬಿ2’ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಅರ್ಪಿತ್ ಅಲೆಗ್ಸಾಂಡರ್ ಎಂಬುವವರು ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಆರ್ಪಿಎಫ್ಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಟಿಟಿಇ (ಪ್ರಯಾಣ ಟಿಕೆಟ್ ಪರಿವೀಕ್ಷಕ) ಗಜಾನನ ಬಿ.ಭಟ್ ಅವರು ಆರ್‌ಪಿಎಫ್ ಎಎಸ್ಐ ಕೆ.ಎ.ಕ್ಯೂಟ್ ಮತ್ತು ಕಾನ್ಸ್‌ಟೇಬಲ್ ಕರುಣಾಕರ್ ಬಳಿ ದೂರು ದಾಖಲಿಸಿದ್ದರು.
ಬಳಿಕ ಕಾರವಾರದಲ್ಲಿರುವ ರೈಲ್ವೆ ಇಲಾಖೆಯ ಸಬ್ ಇನ್‌ಸ್ಪೆಕ್ಟರ್ ರೈಲಿನ ಸ್ಥಿತಿಯನ್ನು ಆನ್‌ಲೈನ್ ಮೂಲಕ ಪರಿಶೀಲನೆ ನಡೆಸಿದಾಗ ಇಬ್ಬರು ಶಂಕಿತ ಯುವಕರು ರೈಲಿನಲ್ಲಿ ಹೊರಗೆ ಅನುಮಾನಾಸ್ಪದವಾಗಿ ಜನರಲ್ ಬೋಗಿಗಳಿಗೆ ಪ್ರವೇಶ ಮಾಡುತ್ತಿರುವುದು ಕಂಡು ಬಂದಿತ್ತು. ಕ್ರಾಸಿಂಗ್‌ನಲ್ಲಿ ರೈಲು ನಿಲ್ಲುವ ಸಂದರ್ಭ ಈ ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯುವಂತೆ ಉಡುಪಿ ಜಿಲ್ಲೆಯ ಸೇನಾಪುರ ರೈಲ್ವೆ ಸ್ಟೇಷನ್ ಮಾಸ್ಟರ್‌ಗೆ ಸೂಚಿಸಿದ್ದರು. ಕ್ರಾಸಿಂಗ್‌ನಲ್ಲಿ ರೈಲು ನಿಂತಾಗ ಒಬ್ಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನ ಬಳಿ ಅರ್ಪಿತ್ ಅಲೆಗ್ಸಾಂಡರ್‌ರಿಂದ ಕದ್ದ ಮೊಬೈಲ್ ಫೋನ್ ಪತ್ತೆಯಾಗಿದೆ.
ಬಳಿಕ ಇನ್ನೊಬ್ಬ ಶಂಕಿತನನ್ನು ಭಟ್ಕಳದಲ್ಲಿ ವಶಕ್ಕೆ ಪಡೆದು ಎರಡು ಮೊಬೈಲ್ ಫೋನ್ ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಯಿತು ಎಂದು ಕೊಂಕಣ ರೈಲ್ವೆ ನಿಗಮ ತಿಳಿಸಿದೆ.
ವಿಚಾರಣೆ ನಡೆಸಿದಾಗ, ರೈಲಿನಲ್ಲಿ ತಿರುವನಂತಪುರಂನಿಂದ ಮಡಗಾಂವ್‌ಗೆ ‘ಎ1’ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಟಿ.ಕೆ.ತಂಗನ್ ಎಂಬ ಮಹಿಳೆಯ ಮೂರು ಮೊಬೈಲ್ ಫೋನ್ ಮತ್ತು ನಗದು ಹೊಂದಿದ್ದ ಹ್ಯಾಂಡ್ ಬ್ಯಾಗ್ ಕಳವಾಗಿರುವುದು ತಿಳಿದುಬಂದಿದೆ. ಆರೋಪಿ ಶಫೀಕ್‌ನನ್ನು ಮಂಗಳೂರಿನ ಪೊಲೀಸರಿಗೆ ಹಾಗೂ ಸಿ.ಪಿ. ಸಿಯಾದ್‌ನನ್ನು ಮಣಿಪಾಲ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.