ಮಂಗಳೂರು : ಕಲೆಕ್ಷನ್ ದುಡ್ಡು ಕಟ್ಟಲು ಬ್ಯಾಂಕ್ ಗೆ ತೆರಳಿದ್ದ ಬಂಕ್ ಮ್ಯಾನೇಜರ್ ಅನ್ನು ಆಗಂತುಕರಿಬ್ಬರು ಹಲ್ಲೆಗೈದು 4.20 ಲಕ್ಷ ರೂ. ಹಣ ದರೋಡೆಗೈದ ಘಟನೆ ನಗರದ ಚಿಲಿಂಬಿಯಲ್ಲಿ ನಡೆದಿದೆ.
ನಗರದ ಗಾಂಧಿನಗರದಲ್ಲಿರುವ ಪೆಟ್ರೋಲ್ ಬಂಕ್ ಮ್ಯಾನೇಜರ್ ಭೋಜಪ್ಪ(57) ಇಂದು ಮಧ್ಯಾಹ್ನ 12.30ರ ಸುಮಾರಿಗೆ ಚಿಲಿಂಬಿಯಲ್ಲಿರುವ ಸಾರಸ್ವತ ಬ್ಯಾಂಕ್ ಗೆ ನಗದು ಡೆಪಾಸಿಟ್ ಮಾಡಲು ಬೈಕ್ ನಲ್ಲಿ ಆಗಮಿಸುತ್ತಿದ್ದರು.
ಈ ಸಂದರ್ಭ ಅವರು ಚಿಲಿಂಬಿಯಲ್ಲಿ ಯೂಟರ್ನ್ ಮಾಡುತ್ತಿದ್ದ ವೇಳೆ ಸ್ವಿಗ್ಗಿ ಸಂಸ್ಥೆಯ ಟೀಶರ್ಟ್ ಧರಿಸಿದ್ದ ಆಗಂತುಕರಿಬ್ಬರು ಬೈಕ್ ನಲ್ಲಿ ಬಂದು ಬ್ಯಾಟ್ ನಲ್ಲಿ ಹಲ್ಲೆ ನಡೆಸಿ ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಭೋಜಪ್ಪನವರ ತಲೆ, ಭುಜಕ್ಕೆ ಏಟಾಗಿದೆ. ಅದೃಷ್ಟವಶಾತ್ ಭೋಜಪ್ಪನವರು ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.