ಮಂಗಳೂರು: ಭವಿಷ್ಯದಲ್ಲಿ ಮಕ್ಕಳು ಅತ್ಯಂತ ಸುಂದರ, ಸ್ವಚ್ಛ ಪರಿಸರ ಕಾಣಬೇಕಾದರೆ ಇಂದೇ ಕಾರ್ಯ ಪ್ರವೃತ್ತರಾಗಬೇಕಿದೆ. ನೆಟ್ಟ ಗಿಡ ಇಂದೇ ಪ್ರಯೋಜನ ಆಗದಿದ್ದರೂ ಮುಂದಕ್ಕೆ ಪ್ರಯೋಜನ ಸಿಗುವುದರಲ್ಲಿ ಸಂಶಯವಿಲ್ಲ ಎಂದು ಶಾಸಕ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಹ್ಯೂಮನ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಅರಣ್ಯ ಇಲಾಖೆಯ ಸಹಕಾರದಲ್ಲಿ, ತಲಪಾಡಿಯಲ್ಲಿ ನಡೆದ ರಸ್ತೆಬದಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನರಲ್ಲಿ ಪರಿಸರ ಪ್ರೇಮ ಇದ್ದಾಗ ಉತ್ತಮ, ಹಸಿರು ಪರಿಸರ ಕಾಣಲು ಸಾಧ್ಯ. ಆದರೆ ಇಂದು ನಾವು ಮರಗಳನ್ನು ಕಡಿದು ಪರಿಸರ ಹಾಳು ಮಾಡಿದ್ದೇವೆ. ಈ ಬಗ್ಗೆ ಈಗಲೇ ಜಾಗೃತರಾಗುವುದು ಮುಖ್ಯ ಎಂದು ಹೇಳಿದರು.
ಇನ್ನು ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು ಮಾತನಾಡಿ, ಲಾಕ್ಡೌನ್ ಸಂದರ್ಭದಲ್ಲಿ ಗಡಿ ಪ್ರದೇಶದಲ್ಲಿ ಸಾವಿರಾರು ವಲಸೆ ಕಾರ್ಮಿಕರಿಗೆ ಊಟೋಪಚಾರದ ವ್ಯವಸ್ಥೆ ಮಾಡಿದ ಸಂಘಟನೆ, ಇಂದು ಪರಿಸರ ಪ್ರೇಮಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಸದಸ್ಯ ಇಬ್ರಾಹಿಂ ತಲಪಾಡಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯೆ ಸುರೇಖಾ ಚಂದ್ರಹಾಸ, ತಲಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ಗಣೇಶ್ ಭಟ್, ವಲಯ ಅರಣ್ಯಾಧಿಕಾರಿ ಶ್ರೀಧರ್ ಎಸ್, ಉಪ ಅರಣ್ಯಾಧಿಕಾರಿ ಎಸ್.ರವಿಕುಮಾರ್, ಪ್ರಮುಖರಾದ ಗಣೇಶ್ ಶೆಟ್ಟಿ, ಇರ್ಷಾದ್ ಅಜ್ಜಿ ನಡ್ಕ, ಅಶ್ರಫ್ ಮಂಜಲ್ಪಾದೆ, ಸಿದ್ದೀಕ್ ತಲಪಾಡಿ, ಲತಾ ತಲಪಾಡಿ ಇನ್ನಿತರರು ಉಪಸ್ಥಿತರಿದ್ದರು. ಬಿ.ಎಸ್.ಇಸ್ಮಾಯಿಲ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಪಂಚಾಯಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ ಕಾರ್ಯಕ್ರಮ ಸಂಯೋಜಿಸಿದ್ದರು.