ಮಂಗಳೂರು : ನಗರದ ಪ್ರಮುಖ ರಸ್ತೆಗಳ ಸ್ವಚ್ಛತೆಗೆ ಸ್ವೀಪರ್ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದ್ದು, ಇದರಿಂದ ಹೆಚ್ಚು ಕಾರ್ಮಿಕರ ಶ್ರಮವಿಲ್ಲದೆ ನಗರವನ್ನು ಅಂದವಾಗಿಡಲು ಸಾಧ್ಯವಾಗುತ್ತಿದೆ.
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ತಂತ್ರಜ್ಞಾನ ಆಧಾರಿತ ಸ್ವೀಪಿಂಗ್ (ಕಸ ಗುಡಿಸುವ) ಯಂತ್ರ ಕಾರ್ಯನಿರ್ವಹಿಸುತ್ತಿದೆ. ಇದರ ಉಸ್ತುವಾರಿಯನ್ನು ಆ್ಯಂಟನಿ ವೇಸ್ಟ್ ಮ್ಯಾನೇಜ್ಮೆಂಟ್ ನೋಡಿಕೊಳ್ಳುತ್ತಿದೆ. ಈ ಸ್ವೀಪರ್ ಯಂತ್ರ ವ್ಯಾಕ್ಯೂಮ್ ಕ್ಲೀನರ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಸ್ತೆಯಲ್ಲಿರುವ ಧೂಳು ಹಾಗೂ ಕಸ, ಕಡ್ಡಿಗಳನ್ನು ಎಳೆದುಕೊಳ್ಳುವ ಮೂಲಕ ಸಂಪೂರ್ಣವಾಗಿ ಸ್ವಚ್ಛ ಮಾಡುತ್ತಿವೆ.
ರಸ್ತೆ ವಿಭಜಕಗಳ ಬದಿಯಲ್ಲಿ ಸೇರಿಕೊಂಡಿರುವ ಧೂಳು, ಕಸ-ಕಡ್ಡಿಗಳು ಗಾಳಿ ಹಾರಿ ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಉಂಟು ಮಾಡುತ್ತದೆ. ಕೆಲವೊಂದು ಸಲ ಅಪಘಾತಕ್ಕೂ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ರಸ್ತೆ ವಿಭಜಕಗಳ ಬದಿಯಲ್ಲಿ ಸೇರಿರುವ ತ್ಯಾಜ್ಯಗಳನ್ನು ಸ್ವಚ್ಛಗೊಳಿಸುವ ಕಾರ್ಯ ಸ್ವೀಪರ್ ಯಂತ್ರದ ಮೂಲಕ ಮಾಡಲಾಗ್ತಿದೆ.
ಟ್ರಕ್ಗೆ ಜೋಡಿಸಿರುವ ವ್ಯಾಕ್ಯೂಮ್ ಸ್ವೀಪರ್ ಯಂತ್ರದ ಅಡಿಭಾಗದಲ್ಲಿ ಚಲಿಸುವ ಬ್ರಶ್ಗಳನ್ನು ಅಳವಡಿಸಲಾಗಿದೆ. ಈ ಬ್ರಶ್ಗಳು ಧೂಳು, ಕಸ-ಕಡ್ಡಿಗಳನ್ನು ಗುಡಿಸಿ ಯಂತ್ರದ ಮಧ್ಯಭಾಗಕ್ಕೆ ತರುತ್ತದೆ. ಅಲ್ಲಿ ಅಳವಡಿಸಿರುವ ವ್ಯಾಕ್ಯೂಮ್ ಮೂಲಕ ತ್ಯಾಜ್ಯಗಳನ್ನು ಎಳೆದುಕೊಂಡು ಮೇಲ್ಭಾಗದ ಟ್ಯಾಂಕ್ನಲ್ಲಿ ಸಂಗ್ರಹಿಸುತ್ತದೆ. ಈ ಮೂಲಕ ಗಾಳಿಗೆ ಧೂಳು ಎದ್ದು ಅನಗತ್ಯ ತೊಂದರೆಗಳಾಗುವುದು ತಪ್ಪುತ್ತದೆ.
ಈ ಬಗ್ಗೆ ಆ್ಯಂಟನಿ ವೇಸ್ಟ್ ಮ್ಯಾನೇಜ್ ಮೆಂಟ್ನ ಹಿರಿಯ ನಿರ್ವಹಣಾಧಿಕಾರಿ ಫೆಲಿಕ್ಸ್ ಪ್ರಕಾಶ್ ಡಾಂಟೆ ಮಾತನಾಡಿ, ಈ ಸ್ವೀಪರ್ ಯಂತ್ರದಲ್ಲಿ ಧೂಳು ಹಾರದಂತೆ 10 ಮೈಕ್ರೋ ಲೇಯರ್ ಫಿಲ್ಟರನ್ನು ಅಳವಡಿಸಲಾಗಿದೆ. ಈ ಯಂತ್ರವನ್ನು ಒಬ್ಬ ವ್ಯಕ್ತಿಯಿಂದ ನಿರ್ವಹಣೆ ಮಾಡಬಹುದು. ಸಹಾಯಕರಾಗಿ ಓರ್ವ ಕಾರ್ಮಿಕನ ಅಗತ್ಯವಿರುತ್ತದೆ. ಈ ಮೂಲಕ ರಸ್ತೆ ಸ್ವಚ್ಛತೆಗೆ ಹೆಚ್ಚು ಕಾರ್ಮಿಕರ ಬಳಕೆಯನ್ನು ಕಡಿಮೆಗೊಳಿಸಿದಂತಾಗುತ್ತದೆ. ಪ್ರತಿ ದಿನ 50 ಕಿ.ಮೀ.ರಸ್ತೆಯನ್ನು ಈ ಸ್ವೀಪರ್ ಯಂತ್ರದ ಮೂಲಕ ಶುಚಿಗೊಳಿಸಲಾಗುತ್ತದೆ. ಹಗಲು ವೇಳೆ ರಸ್ತೆ ಸಂಚಾರಕ್ಕೆ ತೊಡಕು ಉಂಟಾಗದಂತೆ ರಾತ್ರಿ ವೇಳೆ ಸ್ವೀಪರ್ ಯಂತ್ರವನ್ನು ಬಳಸಿ ರಸ್ತೆ ಸ್ವಚ್ಛತಾ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದರು.