ಬಂಟ್ವಾಳ: ರಾಷ್ಟ್ರಿಯ ಹೆದ್ದಾರಿ 75ರ ಬಿ.ಸಿ.ರೋಡ್ನಿಂದ ಮಾಣಿವರೆಗಿನ ಹೆದ್ದಾರಿಯ ಕೆಲ ತಗ್ಗುಗಳನ್ನು ಮುಚ್ಚಲಾಗಿದೆ. ಆದರೆ ರಸ್ತೆಯ ಎಡ, ಬಲಗಳಲ್ಲಿ ಏರುತಗ್ಗುಗಳು ಅಪಾಯಕಾರಿಯಾಗಿ ಪರಿಣಮಿಸಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿವೆ.
ಈ ಪರಿಣಾಮ ರಾತ್ರಿಯಷ್ಟೇ ಅಲ್ಲ, ಹಗಲಿನಲ್ಲೂ ಕೂಡಾ ಎದುರಿನಿಂದ ಅಥವಾ ರಾಂಗ್ ಸೈಡ್ನಲ್ಲಿ ವಾಹನಗಳೇನಾದರೂ ಬಂದರೆ ಸ್ಥಳಾವಕಾಶ ಕೊಡಲು ಹೋಗುವವರು ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಹಲವೆಡೆ ಹೊಸ ಅಪಘಾತ ವಲಯಗಳೂ ಉದ್ಭವವಾಗಿದ್ದು,ಕಳೆದ ಎರಡು ವಾರದಲ್ಲಿ ಎರಡು ಅಪಘಾತ ಪ್ರಕರಣಗಳು ಸಂಭವಿಸಿದೆ.
ಓದಿ: ಮಂಗಳೂರು ಮನಪಾ ಮಾಜಿ ಮೇಯರ್ ಕೆ.ಕೃಷ್ಣಪ್ಪ ಮೆಂಡನ್ ನಿಧನ
ಅದೇ ರೀತಿ ಮೇಲ್ಕಾರ್ ಟ್ರಾಫಿಕ್ ಠಾಣಾ ಮುಂಭಾಗದ ರಸ್ತೆ ಪ್ಯಾಚ್ ವರ್ಕ್ ಸರಿಯಾಗಿ ಆಗಿಲ್ಲ. ರಸ್ತೆ ಕಿತ್ತುಹೋಗಿ ಧೂಳು ತುಂಬಿಕೊಂಡಿದ್ದು, ವಾಹನಗಳು ಎದುರು-ಬದುರಾಗುವಾಗ ಅಪಘಾತವಾಗುವ ಸಂಭವವಿದೆ. ಎರಡು ದಿನದ ಹಿಂದೆ ಕೃಷ್ಣಕೋಡಿ ಎಂಬಲ್ಲಿ ಟ್ರಕ್ ಮಗುಚಿ ಚಾಲಕ ಮೃತಪಟ್ಟ ಘಟನೆ ನಡೆದಿತ್ತು. ಅಷ್ಟು ಮಾತ್ರವಲ್ಲ, ಇತ್ತೀಚೆಗೆ ಕಲ್ಲಡ್ಕ ದಾಸಕೋಡಿ ಬಳಿ ಬೈಕ್ ಸವಾರರೊಬ್ಬರು ಇದೇ ರೀತಿಯ ಅಪಘಾತದಲ್ಲಿ ಸಿಲುಕಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.