ಮಂಗಳೂರು: ಪ್ರಾಂಶುಪಾಲೆ ಹುದ್ದೆಯಿಂದ ನಿವೃತ್ತರಾದ ಮಹಿಳೆಯೊಬ್ಬರು ವಂಚಕರ ಬಲೆಗೆ ಬಿದ್ದು, 72 ಲಕ್ಷ ರೂ ಕಳೆದುಕೊಂಡ ಘಟನೆ ನಡೆದಿದೆ.
ನಿವೃತ್ತ ಪ್ರಾಂಶುಪಾಲೆಗೆ ವಾಟ್ಸ್ಆ್ಯಪ್ ಮುಖಾಂತರ ಯಾರೋ ಅಪರಿಚಿತ ವ್ಯಕ್ತಿಗಳು ಸತ್ಯಂ ಪಾಂಡೆ ಮತ್ತು ಮಿತ್ತಲ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡು ಅತ್ಯಂತ ಆತ್ಮೀಯರಾಗಿ ಮಾತನಾಡಿಕೊಂಡಿದ್ದರು. ಈ ವ್ಯಕ್ತಿಗಳು ನಂತರದ ದಿನಗಳಲ್ಲಿ ಮಹಿಳೆಯೊಂದಿಗೆ ವಾಟ್ಸ್ಆ್ಯಪ್ ಮುಖಾಂತರ ನಿರಂತರವಾಗಿ ಸಂಪರ್ಕದಲ್ಲಿದ್ದರು. ಅಪರಿಚಿತ ವ್ಯಕ್ತಿಗಳು ಇವರಿಗೆ ಲಾಟರಿ ಹಣ ಬಂದಿರುವುದಾಗಿ ತಿಳಿಸಿ ಹಾಗೂ ಈ ಹಣವನ್ನು ಅವರ ಖಾತೆಗೆ ಜಮಾ ಮಾಡುವುದಾಗಿಯೂ ತಿಳಿಸಿದ್ದಾರೆ.
ನಿಮ್ಮ ಬ್ಯಾಂಕ್ ಖಾತೆಗೆ ನಮ್ಮದೇ ಮೊಬೈಲ್ ನಂಬರ್ ಅನ್ನು ಸೇರಿಸಿ ಎಂದು ನಂಬಿಸಿದ್ದರು. ಅದರಂತೆ ವಂಚಕರ ಮೊಬೈಲ್ ನಂಬರ್ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆರ್ಯ ಸಮಾಜ ರೋಡ್ ಬ್ರಾಂಚ್ ಖಾತೆ ನಂಬರ್ ಮತ್ತು ಇಂಡಿಯನ್ ಬ್ಯಾಂಕ್, ಬಿಜೈ ಶಾಖೆ ಖಾತೆ ನಂಬರ್ಗೆ ಲಿಂಕ್ ಮಾಡಿಸಿದ್ದರು. ಇದಾದ ನಂತರ ಮಹಿಳೆಗೆ ನಿವೃತ್ತಿಯಿಂದ ಬಂದ ಹಣ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ 50,55,118 ರೂಗಳು ಮತ್ತು ಇಂಡಿಯನ್ ಬ್ಯಾಂಕ್ ಖಾತೆಗೆ 22,31,798 ರೂಗಳು ಜಮೆಯಾಗುತ್ತದೆ.
ನಂತರ ಈ ಅಪರಿಚಿತ ವ್ಯಕ್ತಿಯು ನಿವೃತ್ತ ಪ್ರಾಂಶುಪಾಲೆಯ ಗಮನಕ್ಕೆ ಬಾರದೇ ಒಟ್ಟು 72,86,916 ರೂಗಳನ್ನು ಅನಧಿಕೃತವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಿವೃತ್ತ ಪ್ರಾಂಶುಪಾಲೆ ಬ್ಯಾಂಕ್ನಲ್ಲಿ ಹೋಗಿ ವಿಚಾರಿಸಿದಾಗ ವಂಚನೆ ಅವರ ಗಮನಕ್ಕೆ ಬಂದಿದೆ. ಈ ರೀತಿಯಾಗಿ ಅಪರಿಚಿತ ವ್ಯಕ್ತಿಗಳು ಆನ್ ಲೈನ್ ಮುಖಾಂತರ ಒಟ್ಟು 72,86,916 ರೂಗಳನ್ನು ಮೋಸದಿಂದ ವರ್ಗಾವಣೆ ಮಾಡಿಕೊಂಡು ಆನ್ ಲೈನ್ ವಂಚನೆ ಮಾಡಿದ್ದಾರೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಯುವತಿಯಿಂದ ಅಶ್ಲೀಲ ವಿಡಿಯೋ ಕರೆ; 12 ಲಕ್ಷ ರೂಪಾಯಿ ಕಳ್ಕೊಂಡ ವೃದ್ಧ
ಬ್ಯಾಂಕ್ ಖಾತೆಗಳಿಂದ ಹಣ ದೋಚುತ್ತಿದ್ದ ಇಬ್ಬರು ವಂಚಕರು ಸೆರೆ: ಇತ್ತೀಚಿಗೆ, ಆಧಾರ್ ಕಾರ್ಡ್ ಎನೇಬಲ್ ಸಿಸ್ಟಂನಡಿ (ಎಇಪಿಎಸ್) ಬಯೊಮೆಟ್ರಿಕ್ ಮೂಲಕ ಬ್ಯಾಂಕ್ ಖಾತೆಯಲ್ಲಿ ಹಣ ದೋಚುವ ಟ್ರೆಂಡ್ ಮಾಡಿಕೊಂಡಿರುವ ಸೈಬರ್ ಖದೀಮರು ಬೆಂಗಳೂರು ಮಾತ್ರವಲ್ಲದೇ ರಾಜ್ಯಾದ್ಯಂತ ಜನರನ್ನು ವಂಚಿಸುತ್ತಿದ್ದಾರೆ. ಹೀಗೆ ರಾಜಧಾನಿ ಬೆಂಗಳೂರಿನಲ್ಲಿ ಬೆರಳಚ್ಚುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಖಾತೆದಾರರರಿಗೆ ಅರಿವಿಲ್ಲದಂತೆ ಹಣ ದೋಚುತ್ತಿದ್ದ ಇಬ್ಬರು ಬಿಹಾರ ಮೂಲದ ಆರೋಪಿಗಳನ್ನು ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬೆಂಗಳೂರಿನ ನಗರದ ನಾನಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 115 ಎಇಪಿಎಸ್ ವಂಚನೆ ಪ್ರಕರಣಗಳಲ್ಲಿ ಮೊದಲ ಬಾರಿಗೆ ಆರೋಪಿಗಳನ್ನು ಬಂಧಿಸಿದಂತಾಗಿತ್ತು. ಮೊಹಮ್ಮದ್ ಪರ್ವಾಜ್ ಹಾಗೂ ಅಬುಜರ್ ಬಂಧಿತರು.