ಬಂಟ್ವಾಳ: ಇತ್ತೀಚೆಗೆ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನ ರಕ್ಷಣೆಗೆ ನದಿಗೆ ಧುಮುಕಿದ ಸ್ಥಳೀಯ ಈಜುಗಾರರ ಬೇಡಿಕೆಗೆ ಅನುಗುಣವಾಗಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನವು ಸೇವಾಂಜಲಿ ರಕ್ಷಕ ಎನ್ನುವ ನಾಡದೋಣಿಯನ್ನು ಕೊಡುಗೆಯಾಗಿ ನೀಡಿತ್ತು.
ಬಂಟ್ವಾಳದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಇದೀಗ ಈಜುಗಾರರಾದ ಸತ್ತಾರ್, ಮಹಮ್ಮದ್ ಮತ್ತವರ ತಂಡ ದೋಣಿಯ ಮೂಲಕ ಜನರ ರಕ್ಷಣೆಗೆ ಸಿದ್ಧಗೊಂಡು ನಿಂತಿದೆ. ಗೃಹರಕ್ಷಕದಳ, ಅಗತ್ಯವಿದ್ದರೆ ವಿಪತ್ತು ನಿರ್ವಹಣಾ ಪಡೆಯೂ ಆಗಮಿಸಲಿದೆ ಎಂದು ತಹಶೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ಬಂಟ್ವಾಳ ತಾಲೂಕಿನ ಏಳು ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬಂಟ್ವಾಳ ಐಬಿಯ ಬದಲು ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೇಂದ್ರ ತೆರೆಯಲಾಗಿದೆ. ಇದುವರೆಗೆ ಯಾರೂ ಆಗಮಿಸಿಲ್ಲ. ಪ್ರವಾಹ ಇಳಿಮುಖವಾಗುವ ಸಾಧ್ಯತೆ ಇದ್ದರೂ ಮುಂಜಾಗ್ರತಾ ಕ್ರಮವಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.