ಬಂಟ್ವಾಳ: ಕೋವಿಡ್ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳು ಬಂದ್ ಆಗಿದ್ದು, ಈ ಸಂದರ್ಭದಲ್ಲಿ ಶಿಥಿಲಗೊಂಡಿರುವ ತಾಲೂಕಿನ 63 ಅಂಗನವಾಡಿ ಕೇಂದ್ರಗಳನ್ನು ದುರಸ್ತಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ವಿಭಾಗದಲ್ಲಿ 341ರ ಪೈಕಿ 33 ಹಾಗೂ ವಿಟ್ಲ ಯೋಜನೆಯ 229 ರ ಪೈಕಿ 30 ಅಂಗನವಾಡಿ ಕೇಂದ್ರಗಳು ಈ ಬಾರಿ ದುರಸ್ತಿಯಾಗಲಿವೆ. ಕಟ್ಟಡ ದುರಸ್ತಿ, ಸುಣ್ಣ, ಬಣ್ಣ, ಟೈಲ್ಸ್ ಅಳವಡಿಕೆ, ಕಿಟಕಿ ಬಾಗಿಲು ದುರಸ್ತಿ, ಮೇಲ್ಛಾವಣಿ, ಅಡುಗೆ ಕೋಣೆ, ಶೌಚಾಲಯ, ಆವರಣ ಗೋಡೆ ಮೊದಲಾದ ಕಾಮಗಾರಿಗಳು ನಡೆಯಲಿದೆ.
ಬಂಟ್ವಾಳ ಯೋಜನೆ ವ್ಯಾಪ್ತಿಯ 33 ಅಂಗನವಾಡಿ ಕೇಂದ್ರಗಳಿಗೆ ಒಟ್ಟು 21,54,416 ರೂ. ಅನುದಾನ ಹಾಗೂ ವಿಟ್ಲ ಯೋಜನೆ ವ್ಯಾಪ್ತಿಯ 30 ಕೇಂದ್ರಗಳಿಗೆ 15 ಲಕ್ಷ ರೂ.ಗಳ ಕ್ರೀಯಾಯೋಜನೆ ಸಿದ್ಧಗೊಂಡಿದ್ದು, ಒಟ್ಟು 36,54,416 ರೂ.ಗಳಲ್ಲಿ ಕಾಮಗಾರಿ ನಡೆಯಲಿದೆ. ಇದರಲ್ಲಿ ಈಗಾಗಲೇ 10 ಲಕ್ಷ ರೂ. ಬಿಡುಗಡೆಗೊಂಡಿದೆ.
ಬಂಟ್ವಾಳ ವ್ಯಾಪ್ತಿಯಲ್ಲಿ ಸುಮಾರು 10 ಅಂಗಡಿವಾಡಿ ಕೇಂದ್ರಗಳ ಕಾಮಗಾರಿ ಹಿಂದಿನ ಅವಧಿಯಲ್ಲಿ ನಡೆದಿದ್ದು, ಅದನ್ನು ಈ ಬಾರಿಯ ಅನುದಾನಕ್ಕೆ ಸೇರಿಸಲಾಗಿದೆ.
ಇನ್ನು ಬಂಟ್ವಾಳ ಯೋಜನೆಯ ವ್ಯಾಪ್ತಿಗೆ ಗಾಡಿಪಲ್ಕೆ, ಹೂಹಾಕುವಕಲ್ಲು, ಮಿತ್ತಕೋಡಿ ಸೈಟ್, ಕಲ್ಲಡ್ಕ ಶಾಲೆ, ಮಲಾರ್ಪದವು, ಪಿಲಿಮೊಗರು, ಶಿವನಗರ, ಪಾಂಡವರಕಲ್ಲು, ದಾಸಕೋಡಿ ಮುಂತಾದ ಅಂಗನವಾಡಿ ಕೇಂದ್ರಗಳು ಹಾಗೂ ವಿಟ್ಲ ಯೋಜನೆ ವಿಭಾಗಕ್ಕೆ ಪರಿಯಲ್ತಡ್ಕ, ಕೋಡಂದೂರು, ಅಜೇರು, ಕಡೆಂಗೋಡ್ಲು, ತಾರಿದಳ, ಬರಿಕಟ್ಟೆ, ಕೊರತಿಕಟ್ಟೆ, ಮಲ್ಲಡ್ಕ, ಸೂರ್ಯ, ಕುಂಡಡ್ಕಪಾದೆ, ಒಡಿಯೂರು, ಬೇಡುಗುಡ್ಡೆ, ಕುಕ್ಕಾಜೆ, ಮಂಕುಡೆ, ಬೊಳ್ಮಾರು, ಮಾದಕಟ್ಟೆ ಸೇರಿದಂತೆ ಇತರೆ ಅಂಗನವಾಡಿ ಕೇಂದ್ರಗಳು ದುರಸ್ತಿಗೊಳ್ಳಲಿವೆ.