ಪುತ್ತೂರು: ಹಿಂದೂ ದೇವರನ್ನು ಕ್ಲಬ್ ಹೌಸ್ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ ನಿಂದಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡೆ ಶೈಲಜಾ ಅಮರನಾಥ್ ಸೇರಿದಂತೆ ನಾಲ್ವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರಿನ ಹಿಂದುತ್ವ ಸಂಘಟನೆಗಳ ಮುಖಂಡರು ನಿನ್ನೆ ಮಧ್ಯಾಹ್ನ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 505ರಂತೆ ಶೈಲಜಾ ಅಮರನಾಥ್ ಮತ್ತು ಅವರ ಬೆೆಂಬಲಿಗರ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಗಳೂರಿನ ಬಂದರು ನಿವಾಸಿ ರೂಪಾ.ಎಸ್ ಎನ್ನುವವರು ಕೂಡ ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಿನ್ನೆ ಸಂಜೆ 5ಗಂಟೆ ಸುಮಾರಿಗೆ ಬೈಕ್‌ನಲ್ಲಿ ಆಗಮಿಸಿದ ಮೂವರು, ಶೈಲಜಾ ಅವರ ನಿವಾಸಕ್ಕೆ ದಾಳಿ ಮಾಡಿ ಕಲ್ಲು ತೂರಾಟ ನಡೆಸಿ ಮಡ್ ಆಯಿಲ್ ಎರಚಿದ್ದಾರೆ. ಈ ಬಗ್ಗೆ ಪುತ್ತೂರು ಠಾಣೆಗೆ ಅವರು ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 447 ಹಾಗೂ 427ರಂತೆ ಪೊಲೀಸರು ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಏನಿದು ಪ್ರಕರಣ? ಶೈಲಜಾ ಅಮರನಾಥ್, ಪ್ರೀತು ಶೆಟ್ಟಿ ಯಾನೆ ಮಹಾಲಕ್ಷ್ಮೀ, ಕಾಂಗ್ರೆಸ್ ಐಟಿ ಸೆಲ್‌ನ ಅನಿಲ್, ಪ್ರವೀಣ್, ಪುನೀತ್ ಮುಂತಾದವರು ಸೇರಿಕೊಂಡು ಜೂ. 15ರಂದು ಕ್ಲಬ್ ಹೌಸ್‌ನ ಚರ್ಚೆಯೊಂದರಲ್ಲಿ ಹಿಂದೂ ದೇವರುಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಎರಡು ಸಂಘಟನೆಗಳ ಮುಖಂಡರು ಪೊಲೀಸರಿಗೆ ದೂರು ನೀಡಿದ್ದರು. ಶ್ರೀರಾಮ, ಸೀತೆ ಮತ್ತು ಹನುಮಂತ ದೇವರನ್ನು ಕೆಟ್ಟ ಪದಗಳಿಂದ ನಿಂದಿಸಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅದಾದ ಬಳಿಕ ಕೆಲ ಹೊತ್ತಿನಲ್ಲಿಯೇ ಶೈಲಜಾ ಅವರ ಮನೆ ಮೇಲೆ ದಾಳಿ ಮಾಡಲಾಗಿದೆ. ನಿನ್ನೆ ರಾತ್ರಿ 7ಗಂಟೆ ಸುಮಾರಿಗೆ ಪುತ್ತೂರು ಮಿನಿ ವಿಧಾನಸೌಧದ ಬಳಿ ಇರುವ ಶೈಲಜಾ ಅವರ ಕಚೇರಿಗೆ 'ದೇಶದ್ರೋಹಿ ಶೈಲಾಜರಿಗೆ ಶ್ರದ್ಧಾಂಜಲಿ ಮತ್ತೆ ಹಿಂದೂಸ್ಥಾನದಲ್ಲಿ ಹುಟ್ಟಿ ಬರಬೇಡಿ' ಎಂದು ಬರೆದು ಅಂಟಿಸಿದ್ದಾರೆ.
ಯುಟೂಬ್ ಚಾನಲ್ ವಿರುದ್ಧ ದೂರು: ಯುಟೂಬ್ ಚಾನಲ್ನವರು ರಾಮ ದೇವರ ವಿಚಾರದಲ್ಲಿ ಆಡಿಯೋ ಮತ್ತು ವಿಡಿಯೋ ಎಡಿಟ್ ಮಾಡಿ ನನ್ನ ಫೋನ್ ನಂಬರ್ ಹಾಗೂ ಭಾವಚಿತ್ರ ಬಳಸಿ ಜೂ. 17 ರಂದು ತಪ್ಪು ಸಂದೇಶ ರವಾನೆ ಮಾಡಿದ್ದರಿಂದ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪುತ್ತೂರು ಠಾಣೆಯಲ್ಲಿ ಕಾಂಗ್ರೆಸ್ ಐಟಿ ಶೆಲ್ ವಕ್ತಾರೆ ಶೈಲಜಾ ದೂರು ನೀಡಿದ್ದಾರೆ. ಯುಟೂಬ್ ಚಾನಲ್ ಹಾಗೂ ನಿರೂಪಕಿ ಮೇಲೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: 'ಕುವೆಂಪು ರಾಮನನ್ನು ಹೀರೋ ಮಾಡಿದ್ರು, ಪೆರಿಯಾರ್ ರಾವಣನ ಹೀರೋ ಮಾಡಲು ಹೊರಟಿದ್ರು'