ಬೆಳೆಯುತ್ತಿರುವ ಮಹಾನಗರಗಳಲ್ಲಿ ಹನಿ ಹನಿ ನೀರೂ ಕೂಡ ಭಾಗ್ಯ. ನೀರಿನ ಸಮರ್ಪಕ ಬಳಕೆ ಜತೆಗೆ ಕೊಳಚೆ ನೀರಿನ ಸಂಸ್ಕರಣೆ ದೊಡ್ಡ ಸವಾಲು. ಚರಂಡಿ ನೀರನ್ನೇ ಶುದ್ಧೀಕರಿಸಿ ಮರು ಬಳಕೆ ಮಾಡುವ ಪ್ರಯತ್ನವೂ ರಾಜ್ಯದ ವಿವಿಧೆಡೆ ನಡೆಯುತ್ತಿವೆ.
ಈ ಮೊದಲು ಕಲಬುರ್ಗಿ ಜಿಲ್ಲೆಯಲ್ಲಿ ಚರಂಡಿ ನೀರು ಅಲ್ಲಲ್ಲಿ ಸಂಗ್ರಹವಾಗಿ ಒಂದಿಷ್ಟು ಸಮಸ್ಯೆ ಸೃಷ್ಟಿಯಾಗಿತ್ತು. ಯಾವಾಗ ಜನ ಇದರ ವಿರುದ್ಧ ಧ್ವನಿ ಎತ್ತಿದ್ರೋ ಆಗ ಎಚ್ಚೆತ್ತ ಮಹಾನಗರ ಪಾಲಿಕೆಯು ಚರಂಡಿ ನೀರನ್ನೇ ಶುದ್ಧೀಕರಿಸುವ ಯೋಜನೆ ರೂಪಿಸಿ ಯಶಸ್ವಿಯಾಗಿದೆ.
ಕಲಬುರಗಿ ತಾಲೂಕಿನ ನಂದಿಕೂರು ಬಳಿ 40 ಹಾಗೂ 20 ಎಂಎಲ್‌ಡಿ ಸಾಮರ್ಥ್ಯದ 2 ಘಟಕ ಹಾಗೂ ಕಪನೂರು ಬಳಿ 25 ಎಂಎಲ್‌ಡಿ ಸಾಮರ್ಥ್ಯದ ಒಂದು ಚರಂಡಿ ನೀರು ಶುದ್ಧೀಕರಣ ಘಟಕವಿದೆ. ನಿತ್ಯ 85 ಎಂಎಲ್‌ಡಿ ನೀರು ಶುದ್ಧೀಕರಣ ಮಾಡುವ ಸಾಮರ್ಥ್ಯ ಈ ಘಟಕಗಳಿಗಿದೆ. ನಿತ್ಯ 62 ಎಂಎಲ್‌ಡಿ ಚರಂಡಿ ನೀರು ಮಾತ್ರ ಉತ್ಪತ್ತಿಯಾಗುತ್ತಿದೆ. ಹಾಗಾಗಿ, ಚರಂಡಿ ನೀರಿನ ಸಮಸ್ಯೆ ತೆಲೆದೋರುತ್ತಿಲ್ಲ. ಸದ್ಯ ಈ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ.
ಮಂಗಳೂರಿನಲ್ಲಿ ಕೊಳಚೆ ನೀರಿನ ಸಂಸ್ಕರಣೆ ಕಾರ್ಯ ಉತ್ತಮವಾಗಿದ್ದರೂ ಸುಸಜ್ಜಿತ ಯುಜಿಡಿ ನವೀಕರಣಕ್ಕೆ ಸುಮಾರು 1,000 ಕೋಟಿ ರೂ. ಅನುದಾನ ಬೇಕಿದೆ. ನಗರದಲ್ಲಿ 6.5 ಲಕ್ಷ ಜನಸಂಖ್ಯೆ ಇದೆ. ಇದೀಗ ನಾಲ್ಕು ವೆಟ್ ವೆಲ್ಗಳಿಂದ 25 ರಿಂದ 27MLd ಕೊಳಚೆ ನೀರು ಸಂಸ್ಕರಣೆ ಆಗುತ್ತಿದೆ. ನಗರದಲ್ಲಿರುವ 4 ಎಸ್‌ಟಿಪಿಗಳಲ್ಲಿ ಕೂಡ ಈ ಸಂಸ್ಕರಣೆ ನಡೆಯುತ್ತಿದೆ. ಈಗಿರುವ ವೆಟ್‌ವೆಲ್ ಮತ್ತು ಎಸ್‌ಟಿಪಿ ನವೀಕರಣ ಅಗತ್ಯವಿದ್ದು, ಇದಕ್ಕಾಗಿ ಭಾರಿ ಮೊತ್ತದ ಅನುದಾನ ಸಿಗ್ಬೇಕಿದೆ.
ಜನಸಂಖ್ಯೆ ಸ್ಫೋಟಗೊಂಡಂತೆ ಕೊಳಚೆ ನೀರಿನ ಉತ್ಪತ್ತಿಯೂ ಹೆಚ್ಚುತ್ತಿದೆ. ದಿನ ಬಳಕೆ ನೀರಿಗೆ ಅಭಾವ ಸೃಷ್ಟಿಯಾಗುತ್ತದೆ. ಹಾಗಾಗಿ, ಈಗಲೇ ನೀರನ್ನು ಶುದ್ಧೀಕರಿಸಿ ಮರು ಬಳಕೆ ಮಾಡುವ ಯೋಜನೆಗಳು ಸಕ್ರಿಯಗೊಂಡರೆ ಮುಂದೊಂದು ದಿನ ಎದುರಿಸಬೇಕಾದ ಸಮಸ್ಯೆ ತಡೆಯಬಹುದು.