ಸುಬ್ರಹ್ಮಣ್ಯ: ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಇಂದು ದಕ್ಷಿಣ ಭಾರತದ ನಾಗಾರಾಧನೆಯ ಪ್ರಸಿದ್ಧ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಳದಲ್ಲಿ ಅವರು ಮಹಾಭಿಷೇಕ ಮತ್ತು ನಾಗಪ್ರತಿಷ್ಠಾ ಸೇವೆ ಸಮರ್ಪಿಸಿದರು. ಮಧ್ಯಾಹ್ನದ ವೇಳೆಗೆ ದೇವಸ್ಥಾನಕ್ಕೆ ಆಗಮಿಸಿದ ಅವರು ಸಂಕಲ್ಪ ನೆರವೇರಿಸಿ ದೇವರ ದರ್ಶನ ಪಡೆದ ಬಳಿಕ ದೇವರಿಗೆ ಪಂಚಾಮೃತ ಮಹಾಭಿಷೇಕ ಸೇವೆ ಅರ್ಪಿಸಿ, ಮಧ್ಯಾಹ್ನದ ಮಹಾಪೂಜೆ ವೀಕ್ಷಿಸಿದರು.
ತದನಂತರ ನಾಗಪ್ರತಿಷ್ಠಾ ಸೇವೆ ನೆರವೇರಿಸಿ, ನಾಗಪ್ರತಿಷ್ಠಾ ಮಂಟಪದಲ್ಲಿ ಪ್ರಸಾದ ಸ್ವೀಕರಿಸಿದರು. ದೇವಳದ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯ ಅವರು ಗುರೂಜಿ ಅವರಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿದರು. ಬಳಿಕ ಉಮಾಮಹೇಶ್ವರ ದೇವರ ದರ್ಶನವನ್ನು ಪಡೆದರು. ಹೊಸಳಿಗಮ್ಮನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಆದಿಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ, ಮೃತ್ತಿಕಾ ಪ್ರಸಾದ ಸ್ವೀಕರಿಸಿದರು. ಪೂಜೆ ಇತ್ಯಾದಿ ನಂತರ ದೇವರ ಭೋಜನ ಪ್ರಸಾದ ಸ್ವೀಕರಿಸಿದರು.

ಬಿರಿಂಡಾ ಸಸಿ ನೆಟ್ಟ ಗುರೂಜಿ: ಕ್ಷೇತ್ರಕ್ಕೆ ಆಗಮಿಸಿದ ಗೂರೂಜಿ ಅವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ ಹೂಗುಚ್ಛ ನೀಡಿ ಗೌರವಪೂರ್ವಕವಾಗಿ ಸ್ವಾಗತಿಸಿದರು. ಗುರೂಜಿ ಕ್ಷೇತ್ರದ ಕಾಶಿಕಟ್ಟೆಯ ಬಂಡಿವಾಳದಲ್ಲಿ ಬಿರಿಂಡಾ ಸಸಿ ನೆಟ್ಟು ಗಿಡಕ್ಕೆ ನೀರುಣಿಸಿದರು. ಪುರೋಹಿತರು ವಿವಿಧ ವೈಧಿಕ ವಿಧಾನಗಳನ್ನು ನೆರವೇರಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಆರ್ಟ್ ಆಪ್ ಲಿವಿಂಗ್‌ನ ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ: ಬೆಂಗಳೂರಿನಿಂದ ತೆರಳುತ್ತಿದ್ದ ರವಿಶಂಕರ್ ಗುರೂಜಿ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ