ಮಂಗಳೂರು: ಕಾಂಗ್ರೆಸ್ ಹಿಂದುಳಿದ ವರ್ಗದ ಹಿಂದೂ ಸಮಾಜ, ಪರಿಶಿಷ್ಟ ವರ್ಗ, ಪಂಗಡದ ಜನರಿಗೆ ಅತ್ಯಂತ ಹೆಚ್ಚು ಲಾಭ ಮಾಡಿರುವ ಏಕೈಕ ಪಕ್ಷ. ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವಲ್ಲಿಯೂ ಬಹಳಷ್ಟು ಪರಿಶ್ರಮಿಸಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಇಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣ ಜಯಂತಿ ಹಾಗೂ ಕುದ್ಮಲ್ ರಂಗರಾವ್ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೀತ ಪದ್ಧತಿ ರದ್ದತಿಯಿಂದ ಹಿಡಿದು, ಋಣ ಪರಿಹಾರ ಕಾಯ್ದೆ, ಸಾಮಾಜಿಕ ನ್ಯಾಯದ ಕಾರ್ಯಕ್ರಮದವರೆಗೆ ಹಲವಾರು ಉತ್ತಮ ಕಾರ್ಯಗಳನ್ನು ಮಾಡಿರುವ ಕಾಂಗ್ರೆಸ್ ಶೋಷಿತರ, ಬಡವರ ಪರವಾಗಿ ಬಹಳಷ್ಟು ಕೆಲಸಗಳನ್ನು ಮಾಡಿದೆ ಎಂದು ಹೇಳಿದರು.
ಇಂದು ಮನುಷ್ಯ ಮನುಷ್ಯರ ನಡುವೆಯೇ ಅಪನಂಬಿಕೆ ಸೃಷ್ಟಿಸಿ, ಜನರನ್ನು ಧರ್ಮಾಧಾರಿತವಾಗಿ ವಂಚನೆ ಮಾಡುವಂತಹವರು ಅಧಿಕಾರದಲ್ಲಿರುವ ಈ ಕಾಲಘಟ್ಟದಲ್ಲಿ ನಾವು ಬ್ರಹ್ಮಶ್ರೀ ನಾರಾಯಣ ಗುರುಗಳ ಸಿದ್ದಾಂತವನ್ನು, ಕುದ್ಮುಲ್ ರಂಗರಾವ್ ಅವರ ಕಾರ್ಯವನ್ನು ಕಾಂಗ್ರೆಸ್ನವರು ಜನರಿಗೆ ಹೇಳಿ ಹೆಚ್ಚು ಪ್ರಚಾರ ಮಾಡಬೇಕಾಗಿದೆ ಎಂದು ಹೇಳಿದರು.
ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಲು ಅನೇಕ ದಾರ್ಶನಿಕರು ಹೋರಾಟ ಮಾಡಿದ್ದಾರೆ. ಅವರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಮೊದಲ ಪಂಕ್ತಿಯಲ್ಲಿ ಕಾಣಸಿಗುತ್ತಾರೆ. ಆ ಬಳಿಕ ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ಕಂಡು ಬರುತ್ತಾರೆ. ಉಚ್ಚ ಕುಲದಲ್ಲಿ ಹುಟ್ಟಿದ ಕುದ್ಮುಲ್ ರಂಗರಾವ್ ಅವರು ಶೋಷಿತರ ಪರವಾಗಿ ದನಿ ಎತ್ತಿದವರು. ಈ ಇಬ್ಬರೂ ಆ ಕಾಲದಲ್ಲಿ ಮಾಡಿರುವ ಕಾರ್ಯ ಇಂದಿಗೂ ನಮಗೆ ದಾರಿದೀಪವಾಗಿದೆ ಎಂದು ಹೇಳಿದರು.
ಈ ಸಂದರ್ಭ ಮಾಜಿ ಶಾಸಕ ಜೆ.ಆರ್.ಲೋಬೊ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಾಜಿ ಮೇಯರ್ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ ಮೊಯ್ಲಿ, ಕಾಂಗ್ರೆಸ್ ವಕ್ತಾರರಾದ ವಿಶ್ವಾಸ್ ಕುಮಾರ್ ದಾಸ್, ಟಿ.ಕೆ.ಸುಧೀರ್, ಎ.ಸಿ.ವಿನಯರಾಜ್ ಮತ್ತಿತರರು ಉಪಸ್ಥಿತರಿದ್ದರು.