ಮಂಗಳೂರು : ಅಕ್ರಮ ಮರಳುಗಾರಿಕೆ ನಡೆಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾಜಿ ಸಚಿವ ರಮಾನಾಥ ರೈ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಮನವಿ ಸಲ್ಲಿಸಿದರು.
ಮಾಜಿ ಸಚಿವ ರಮಾನಾಥ ರೈ, ಜಿಲ್ಲಾಧಿಕಾರಿಯವರಿಗೆ ಬಂಟ್ವಾಳ ತಾಲೂಕಿನ ಕಡೇ ಶಿವಾಲಯದಲ್ಲಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಮರಳುಗಾರಿಕೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವ ಬಗ್ಗೆ ಆರೋಪಿಸಿದರು. ಅಲ್ಲದೇ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಕ್ರಮ ಮರಳುಗಾರಿಕೆ ನಡೆಸುವಲ್ಲಿಗೆ ಅಧಿಕಾರಿಗಳನ್ನು ಕಳುಹಿಸಿ ತನಿಖೆ ನಡೆಸುವುದಾಗಿ ಜಿಲ್ಲಾಧಿಕಾರಿಯವರು ಭರವಸೆ ನೀಡಿದರು.
ಬಳಿಕ ಮಾತನಾಡಿದ ರಮಾನಾಥ ರೈ, ಬಂಟ್ವಾಳ ತಾಲೂಕಿನ ಕಡೇ ಶಿವಾಲಯ ಗ್ರಾಮದಲ್ಲಿ ಒಬ್ಬರು ಮರಳುಗಾರಿಕೆ ನಡೆಸಲು ಪರವಾನಗಿ ಪಡೆದುಕೊಂಡಿದ್ದಾರೆ. ಅವರಿಗೆ ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ಮರಳುಗಾರಿಕೆ ನಡೆಸಲು ಅವಕಾಶ ಇರುತ್ತದೆ. ಆದರೆ, ಅವರು ಅಲ್ಲೇ ಸುತ್ತಮುತ್ತಲಿನ ಇತರ ಪ್ರದೇಶಗಳಲ್ಲೂ ಅವರು ಮರಳುಗಾರಿಕೆ ನಡೆಸುತ್ತಿದ್ದಾರೆ. ಅಲ್ಲದೇ ಜೆಸಿಬಿ ಬಳಸಿ ನದಿಯಿಂದ ಮರಳುಗಾರಿಕೆ ಮಾಡಲಾಗುತ್ತಿದೆ. ಜೊತೆಗೆ ಬಂಟ್ವಾಳ ತಾಲೂಕಿನ ಸಜಿಪ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಶೇಖರಣೆ ಮಾಡಲು ಅಡ್ಡೆಯನ್ನು ನಿರ್ಮಿಸಿದ್ದಾರೆ. ಅಲ್ಲದೇ ಯಾರ ಭಯವೂ ಇಲ್ಲದೆ ಬಹಿರಂಗವಾಗಿ ಈ ಕೃತ್ಯವನ್ನು ಅವರು ನಡೆಸುತ್ತಿದ್ದು, ಇದಕ್ಕೆ ಬಂಟ್ವಾಳ ಶಾಸಕರ ಸಹಿತ ಬಿಜೆಪಿ ನಾಯಕರು ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು.