ಮಂಗಳೂರು: ಅವನೇ ಶ್ರೀಮನ್ನಾರಾಯಣ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಹನ್ನೊಂದನೇ ದಿನವಾಗಿದ್ದು, ಕರ್ನಾಟಕಾದ್ಯಂತ ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ದೊರಕಿದೆ. ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿಯೂ ಜನರಿಂದ ಉತ್ತಮ ಸ್ಪಂದನೆ ದೊರಕಿದೆ. ಮೊದಲ ಬಾರಿಗೆ ಕನ್ನಡ ಭಾಷೆಯ ಚಿತ್ರವೊಂದನ್ನು ಹೊರ ರಾಜ್ಯದಲ್ಲಿನ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದರು.
ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಸುಚಿತ್ರಾ ಸಿನಿಮಾ ಮಂದಿರದಲ್ಲಿ ಮಾತನಾಡಿ, ನಮ್ಮ ಕಡೆಯಿಂದ ಉತ್ತಮ ಚಲನಚಿತ್ರಗಳು ನಿರ್ಮಾಣವಾದಷ್ಟು ಇಂತಹ ಪ್ರತಿಕ್ರಿಯೆಗಳು ಅಧಿಕವಾಗುತ್ತಾ ಹೋಗುತ್ತದೆ. ಆದ್ದರಿಂದ ಕನ್ನಡಿಗರ ಪ್ರೋತ್ಸಾಹ ನಮಗೆ ಅಧಿಕವಾಗಿ ದೊರೆಯಬೇಕಾಗಿದೆ ಎಂದು ಹೇಳಿದರು.
ಕರಾವಳಿಯಲ್ಲಿ ಕನ್ನಡ ಸಿನಿಮಾ ಜಾಸ್ತಿಯಾಗಿ ಓಡೋದಿಲ್ಲ ಎಂದು ಹೇಳಲಾಗುತ್ತದೆ. ಆದರೆ ನನ್ನ ಎಲ್ಲಾ ಸಿನಿಮಾಗಳಿಗೆ ಉತ್ತಮ ಸ್ಪಂದನೆ ದೊರಕಿದೆ. ನನ್ನನ್ನು ಪ್ರೋತ್ಸಾಹಿಸಿರುವ ಎಲ್ಲಾ ಕರಾವಳಿಗರಿಗೂ ಧನ್ಯವಾದ ತಿಳಿಸಲು ಬಯಸುತ್ತೇನೆ. ಪೈರಸಿಗೆ ಪ್ರೋತ್ಸಾಹ ನೀಡಬೇಡಿ. ಪೈರಸಿ ಕಾಟ ನಮ್ಮ ಸಿನಿಮಾವನ್ನೂ ಕಾಡುತ್ತಿದೆ. ನಮ್ಮದೊಂದು ತಂಡ ಸಿನಿಮಾ ಪೈರಸಿ ಆಗದಂತೆ ಎಷ್ಟು ಪ್ರಯತ್ನ ಪಟ್ಟರೂ ಬೇರೆ ಸಿನಿಮಾಗಳಿಗೆ ಪೈರಸಿಯಿಂದ ಎಷ್ಟು ತೊಂದರೆ ಆಗಿದೆಯೋ, ಅಷ್ಟೇ ತೊಂದರೆ ನಮ್ಮ ಸಿನಿಮಾಕ್ಕೂ ಆಗಿದೆ. ಪೈರಸಿ ಮಾಡಿದವರಿಗೂ ಪ್ರೇಕ್ಷಕರು ಪ್ರೋತ್ಸಾಹ ನೀಡದೆ ಸಿನಿಮಾ ಮಂದಿರಕ್ಕೇ ಬಂದು ಸಿನಿಮಾ ನೋಡಿ ಎಂದು ರಕ್ಷಿತ್ ಶೆಟ್ಟಿ ಮನವಿ ಮಾಡಿದರು.
ಮೊದಲ ಬಾರಿ ಶ್ರೀಮನ್ನಾರಾಯಣ ಸಿನಿಮಾ ಬಿಡುಗಡೆ ಮಾಡಿದಾಗ ಸಿನಿಮಾ ಉದ್ದವಿದೆ ಎಂಬ ಮಾತು ಕೇಳಿ ಬಂತು. ಆ ನಿಟ್ಟಿನಲ್ಲಿ ಸಿನಿಮಾಕ್ಕೆ ಮತ್ತೆ 15 ನಿಮಿಷ ಕತ್ತರಿ ಪ್ರಯೋಗ ಮಾಡಿದ್ದೇವೆ. ಆದರೆ ಈಗ ಮತ್ತೆ ಎಡಿಟ್ ಮಾಡಿದ ಭಾಗವನ್ನು ಮತ್ತೆ ವಾಪಸ್ ಹಾಕಿ ಎಂದು ಪ್ರೇಕ್ಷಕರು ಕೇಳುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ನಮಗೆ ಸಂತೋಷ ತರುತ್ತಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿದರು.
ಈ ಸಂದರ್ಭ ಸಿನಿಮಾದ ನಾಯಕಿ ಶಾನ್ವಿ ಶ್ರೀವಾತ್ಸವ್, ನಿರ್ದೇಶಕ ಸಚಿನ್, ಖಳನಾಯಕ ಬಾಲಾಜಿ ಮನೋಹರ್, ನಟ ಪ್ರಮೋದ್ ಶೆಟ್ಟಿ ಉಪಸ್ಥಿತರಿದ್ದರು.