ಪುತ್ತೂರು: ಆತನಿಗೆ ಇನ್ನೂ 7 ವರ್ಷ. ಎಲ್ಲಾ ಮಕ್ಕಳಂತೆ ತಾನೂ ಆಟವಾಡಿ, ಓದಿ ಶಿಕ್ಷಣ ಪಡೆದು ಉತ್ತಮ ಕೆಲಸವನ್ನು ಪಡೆಯಲೇಬೇಕೆಂಬ ಕನಸು ಕಟ್ಟಿಕೊಂಡಿದ್ದವನು. ಆದ್ರೆ ಈತನ ಜೀವನದಲ್ಲಿ ಬರಸಿಡಿಲಿನಂತೆ ಪ್ರವೇಶಿಸಿದ ವಿಧಿ ತನ್ನಿಷ್ಟದಂತೆ ಆಟವಾಡಿದೆ.
ಪುಟ್ಟ ಬಾಲಕ ರಜತೀಶ್ (7) ಈಗಾಗಲೇ 2ನೇ ತರಗತಿಯಲ್ಲಿ ಓದುತ್ತಿದ್ದು, ದಲಿತ ಸಮುದಾಯದ ಕೂಡು ಕುಟಂಬದವರೊಂದಿಗೆ ಜೀವನ ನಡೆಸುತ್ತಿದ್ದಾನೆ. ಈತ ನಗರದ ಹೊರವಲಯದ ಉರ್ಲಾಂಡಿಯ ನಾಯರಡ್ಕ ನಿವಾಸಿಯಾಗಿರುವ ರಮೇಶ ಹಾಗೂ ಜಯಂತಿ ದಂಪತಿಯ ಮೂರು ಮಕ್ಕಳಲ್ಲಿ ಎರಡನೇ ಪುತ್ರ. ಕಳೆದ ಆರು ವರ್ಷಗಳ ತನಕ ಯಾವುದೇ ಕಾಯಿಲೆಯಿಲ್ಲದ ಈತನಿಗೆ ಒಮ್ಮೆಲೆ ಶೀತ, ಜ್ವರ, ಕೆಮ್ಮು ಕಾಣಿಸಿಕೊಂಡಿದೆ.
ಆಗಿದ್ದು ಏನು?: ಒಂದು ದಿನ ಶಾಲೆಗೆ ಹೋಗಿ ಬಂದಾತ ಸ್ನಾನ ಮಾಡಿ ಮಲಗಿದ್ದಾನೆ. ಏನಾಯಿತೋ ಗೊತ್ತಿಲ್ಲ, ಕಫ ಜಾಸ್ತಿಯಾಗಿ ಪ್ರಜ್ಞೆ ತಪ್ಪಿದೆ. ತಕ್ಷಣ ಆತನನ್ನು ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ಆತನನ್ನು ತಪಾಸಣೆ ನಡೆಸಿದ ವೈದ್ಯರು, ನಾಲ್ಕು ಇಂಜೆಕ್ಷನ್ ನೀಡಿದ್ದಾರೆ. ಅಷ್ಟರಲ್ಲಿ ಮೂಗು-ಬಾಯಿಯಿಂದ ರಕ್ತ ಸೋರುವಿಕೆ ಉಂಟಾಗಿದೆ. ತಕ್ಷಣ ಪುತ್ತೂರಿನ ಆಸ್ಪತ್ರೆಯವರು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ಬಳಿಕ ಕೆಎಂಸಿಗೆ ಆತನನ್ನು ಕರೆದೊಯ್ದು ದಾಖಲು ಮಾಡಿದ್ದಾರೆ. ತಪಾಸಣೆ ನಡೆಸಿದ ಅಲ್ಲಿಯ ವೈದ್ಯರು ಅಸ್ಥಿಮಜ್ಜೆಯಲ್ಲಿ ರಕ್ತ ಉತ್ಪತ್ತಿಯಾಗುತ್ತಿಲ್ಲ, ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ತಿಳಿಸಿದ್ದಾರೆ.
ಸಮಸ್ಯೆ ಏನು?: ಇದಕ್ಕಾಗಿ ಸುಮಾರು 60 ಲಕ್ಷ ರೂ. ಖರ್ಚು ತಗುಲಲಿದೆ ಎಂದು ತಿಳಿಸಿರುವ ವೈದ್ಯರು, ಉಚಿತ ಚಿಕಿತ್ಸೆ ಅವಕಾಶ ಸಿಕ್ಕಿದರೂ 20ರಿಂದ 25 ಲಕ್ಷವಾದರೂ ನೀವೇ ಭರಿಸಬೇಕಾಗುತ್ತದೆ ಎಂದು ತಿಳಿಸಿರುವುದರಿಂದ ಬಡವರಾದ ರಜತೀಶ್ ಪೋಷಕರು ಕಂಗಾಲಾಗಿದ್ದಾರೆ.
ಆರ್ಥಿಕವಾಗಿ ಬಳಲಿದ್ದ ಅವರು, ಚಿಕಿತ್ಸೆ ಕೊಡಿಸಲಾಗದೆ ಬಳಿಕ ಎರಡು ತಿಂಗಳು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿ ರಕ್ತ ನೀಡಲು ತಿಳಿಸಿದ್ದಾರೆ. ಹೀಗೆ ಒಂದೆರಡು ವಾರ ಸರಿಯಿದ್ದರೆ ಮತ್ತೆ ಅದೇ ಸ್ಥಿತಿಗೆ ಮರಳುವ ಪರಿಸ್ಥಿತಿ ಉಂಟಾಗಿದೆ. ಒಂದೂವರೆ ವರ್ಷದಲ್ಲಿ ಮೂರು ಬಾರಿ ಬೋನ್ ಟೆಸ್ಟ್ ಮಾಡಲಾಗಿದೆ. ತಿಂಗಳಿಗೆ ಎರಡು ಬಾರಿ ರಕ್ತ ಕೊಡಲೇಬೇಕಾದ ಪರಿಸ್ಥಿತಿ ಉಂಟಾಗಿದೆ. ಪ್ರಸ್ತುತ ಕೂಲಿ ಕೆಲಸ ಮಾಡಿ ಹಣ ಹೊಂದಿಸಿ ಎಲ್ಲವನ್ನೂ ಚಿಕಿತ್ಸೆಗೆ ನೀಡಲಾಗುತ್ತಿದೆ. ಇತ್ತೀಚೆಗೆ ಪುತ್ತೂರು ನಗರಸಭೆಗೆ, ಮುಖ್ಯಮಂತ್ರಿಗಳಿಗೆ ಚಿಕಿತ್ಸೆ ವೆಚ್ಚಕ್ಕಾಗಿ ಹಣ ನೀಡುವಂತೆ ಮನವಿ ಮಾಡಿದ್ದರು. ಮುಖ್ಯಮಂತ್ರಿ ಪರಿಹಾರ ನಿಧಿನಿಂದ 20 ಸಾವಿರ ಮಂಜೂರು ಆದರೂ ಅದು ಸರಿಯಾದ ಸಮಯಕ್ಕೆ ಬಳಕೆಯಾಗದೆ ಹಿಂದಕ್ಕೆ ಹೋಗಿದೆ. ಈ ನಡುವೆ ದಲಿತ ಸಂಘಟನೆ ನಮ್ಮ ನೆರವಿಗೆ ಧಾವಿಸಿದೆ ಅಂತಾರೆ ಪೋಷಕರಾದ ರಮೇಶ್.
ಹಣ ಹೊಂದಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದ್ದು, ದಾನಿಗಳು, ಸಂಘ ಸಂಸ್ಥೆಗಳು ಸಹಾಯ ಮಾಡುವಂತೆ ರಮೇಶ್ ಅವರು ಗದ್ಗದಿತರಾಗಿ ವಿನಂತಿಸಿದ್ದಾರೆ. ಚಿಕಿತ್ಸೆಗೆ ಸಹಾಯಹಸ್ತ ನೀಡುವವರು ಪುತ್ತೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕ್ ಖಾತೆ ನಂಬರ್ 64168899351, ಐಎಫ್‌ಎಸ್‌ಸಿ ನಂ. SBI-0040152, ಹೆಸರು ರಮೇಶ್ ಇದಕ್ಕೆ ಹಣ ಜಮೆ ಮಾಡುವಂತೆ ಅವರು ವಿನಂತಿಸಿದ್ದಾರೆ.