ಮಂಗಳೂರು : ಸಲಿಂಗ ವಿವಾಹಕ್ಕೆ ಸುಪ್ರೀಂಕೋರ್ಟ್ ಮಾನ್ಯತೆ ನೀಡಲು ಹೊರಟಿರುವುದು ನಾಗರಿಕ ಸಮಾಜಕ್ಕೆ ನೋವು ತಂದಿದೆ. ಯಾವುದೇ ಕಾರಣಕ್ಕೆ ಭಾರತೀಯ ನಾಗರಿಕತೆ, ಪ್ರಾಚೀನ ಭಾರತದ ಭವ್ಯ ಪರಂಪರೆ ಸಂಸ್ಕೃತಿಯ ನಾಶಕ್ಕೆ ಪ್ರಯತ್ನಿಸಬಾರದು. ಇದು ಜಾರಿಗೆ ಬಂದಲ್ಲಿ ದೇಶವ್ಯಾಪಿ ಸಾಧು, ಸಂತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಎಚ್ಚರಿಕೆ ನೀಡಿದರು.
ನಗರದ ಕದ್ರಿಯಲ್ಲಿರುವ ವಿಶ್ವಶ್ರೀ ಸಭಾಂಗಣದಲ್ಲಿ ಮಾತನಾಡಿದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು, ಸತ್ ಸಂತಾನಕ್ಕಾಗಿ ವಿವಾಹ ಪದ್ಧತಿ ಜಾರಿಯಲ್ಲಿದೆ. ಆದರೆ ಪ್ರಾಣಿಗಳಲ್ಲಿ ಇರುವಂತಹ ಬುದ್ಧಿ ನಾಗರಿಕ ಮನುಷ್ಯನಲ್ಲಿ ಇತ್ತೀಚೆಗೆ ಇಲ್ಲದಂತಾಗಿದೆ. ಸಲಿಂಗ ಕಾಮ ಹಾಗೂ ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಸಿಗಬಾರದು. ಸುಪ್ರೀಂಕೋರ್ಟ್ ಕೂಡ ಇದಕ್ಕೆ ಕಾನೂನಿನ ಮಾನ್ಯತೆ ನೀಡಬಾರದು ಎಂದು ಆಗ್ರಹಿಸಿದರು.
ಈ ವಿಚಾರವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ದೇಶದ ಪ್ರಬುದ್ಧ ನಾಗರಿಕರು, ಕಾನೂನು ಪಂಡಿತರು, ಧರ್ಮಜ್ಞಾನಿಗಳು, ವಿಜ್ಞಾನಿಗಳು ಈ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಬೇಕಾಗಿದೆ. ಅದರ ಸಾಧಕ - ಬಾಧಕಗಳನ್ನು ಕೂಲಂಕಷವಾಗಿ ಪರಾಮರ್ಶಿಸಬೇಕು. ಇದು ತರಾತುರಿಯಲ್ಲಿ ಕೈಗೆತ್ತಿಕೊಳ್ಳುವ ವಿಚಾರವಲ್ಲ. ಇಂತಹ ವಿಚಾರಕ್ಕೆ ಸಾಂವಿಧಾನಿಕ ಮಾನ್ಯತೆ ಬಂದಲ್ಲಿ ಹಾದಿಬೀದಿಯಲ್ಲಿ ತೊಡಗುವ ಸಾಧ್ಯತೆಗಳಿದೆ. ಆದ್ದರಿಂದ ಸುಪ್ರೀಂಕೋರ್ಟ್ ಎಚ್ಚರಿಕೆಯಿಂದ ಈ ಬಗ್ಗೆ ತೀರ್ಪು ನೀಡಬೇಕು ಎಂದು ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಆಗ್ರಹಿಸಿದರು.
ಇದನ್ನೂ ಓದಿ : ಸಲಿಂಗ ವಿವಾಹ: ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳನ್ನೂ ಪ್ರತಿವಾದಿಯನ್ನಾಗಿಸಲು ಕೇಂದ್ರದ ಒತ್ತಾಯ
ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ ನೇತೃತ್ವದ ನ್ಯಾಯಾಧೀಶರ ತಂಡ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದೆ. ಇದರ ಬೆನ್ನಲ್ಲೇ ಸಲಿಂಗ ವಿವಾಹ ಭಾರತದ ಸಂಸ್ಕೃತಿಗೆ ವಿರುದ್ಧವಾದದ್ದು, ಇದಕ್ಕೆ ಕಾನೂನು ಮಾನ್ಯತೆ ನೀಡುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿತ್ತು. ಬಳಿಕ ಈ ಅರ್ಜಿಗಳನ್ನು ಸಾಂವಿಧಾನಿಕ ಪೀಠದ ಮುಂದೆ ವಿಸ್ತೃತ ಚರ್ಚೆ ನಡೆಸಲು ವರ್ಗಾಯಿಸಲಾಗಿತ್ತು.
ಇದರ ಜೊತೆಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ರಾಜ್ಯ ಬಾರ್ ಕೌನ್ಸಿಲ್ಗಳ ಜೊತೆ ಜಂಟಿ ಸಭೆ ನಡೆಸಿದೆ. ಈ ಸಭೆಯಲ್ಲಿ ಸಲಿಂಗ ವಿವಾಹದ ಕುರಿತು ತನ್ನ ಕಳವಳವನ್ನು ವ್ಯಕ್ತಪಡಿಸಿದೆ. "ಸಲಿಂಗ ವಿವಾಹ ಅತಿ ಸೂಕ್ಷ್ಮ ವಿಷಯ ಆಗಿರುವುದರಿಂದ ಸಾಮಾಜಿಕ ಧಾರ್ಮಿಕ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಶಾಸಕಾಂಗವನ್ನೊಳಗೊಂಡ ಸಾಮಾಜಿಕ, ಧಾರ್ಮಿಕ ಗುಂಪುಗಳ ವಿಸ್ತೃತ ಸಮಾಲೋಚನೆ ನಂತರ ಈ ಜಂಟಿ ಸಭೆಯು ಸರ್ವಾನುಮತದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿದೆ.
ಇದನ್ನೂ ಓದಿ : ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ್ರೆ ಸಾಮಾಜಿಕ, ಧಾರ್ಮಿಕ ನಂಬಿಕೆಗಳ ಮೇಲೆ ಪರಿಣಾಮ: ಬಾರ್ ಕೌನ್ಸಿಲ್ ಆಫ್ ಇಂಡಿಯಾ