ಮಂಗಳೂರು: ನಗರದ ಕೆಪಿಟಿ ಬಳಿಯ ಬಾರೆಬೈಲಿನಲ್ಲಿ ಮರವೊಂದು ಬುಡಸಮೇತ ಬಿದ್ದ ಪರಿಣಾಮ ಮನೆ ಸಂಪೂರ್ಣ ನೆಲಸಮವಾಗಿದೆ. ಪರಿಣಾಮ ಮನೆಯೊಳಗಿದ್ದ ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಮನೆಯೊಳಗಿದ್ದ ತಾಯಿ ಗಿರಿಯಮ್ಮ(90) ಹಾಗೂ ಮಗಳು ದೇವಯಾನಿ(60) ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು. ನಿನ್ನೆ ಸಂಜೆ 7.30 ಗಂಟೆಗೆ ಸುರಿದ ಧಾರಾಕಾರ ಮಳೆಗೆ ಬೃಹತ್ ಗಾತ್ರದ ಮರವೊಂದು ಬುಡ ಸಮೇತ ಉರುಳಿದ ಪರಿಣಾಮ ಸಮೀಪದಲ್ಲಿದ್ದ ತೆಂಗಿನ ಮರ, ಹಲಸಿನ ಮರಗಳೂ ಮುರಿದು ಮನೆಯ ಮೇಲೆಯೇ ಬಿದ್ದಿವೆ. ಪರಿಣಾಮ ಮನೆ ಸಂಪೂರ್ಣವಾಗಿ ನೆಲಸಮವಾಗಿದೆ.
ಅಲ್ಲದೆ ಅಲ್ಲೇ ಹಾದು ಹೋಗಿರುವ ವಿದ್ಯುತ್ ತಂತಿಯ ಮೇಲೆ ಮರ ಬಿದ್ದಿರುವುದರಿಂದ ವಿದ್ಯುತ್ ಕಂಬವೂ ಉರುಳಿದೆ.ಈ ಸಂದರ್ಭ ಮನೆಯೊಳಗೆ ತಾಯಿ ಗಿರಿಯಮ್ಮ ಹಾಗೂ ಮಗಳು ದೇವಯಾನಿ ಸಿಲುಕಿಕೊಂಡಿದ್ದರು. ತಕ್ಷಣ ಸ್ಥಳೀಯರು ಮನೆಯೊಳಗೆ ಸಿಕ್ಕಿಹಾಕಿಕೊಂಡಿರುವ ತಾಯಿ-ಮಗಳನ್ನು ರಕ್ಷಿಸಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಗ್ರಾಮ ಲೆಕ್ಕಾಧಿಕಾರಿ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ಮೆಸ್ಕಾಂ ಅಧಿಕಾರಿಗಳು ಆಗಮಿಸಿ ಮರಗಳ ತೆರವು ಕಾರ್ಯ ಕೈಗೊಂಡಿದ್ದಾರೆ. ಮನೆಯೊಳಗಿನ ಸೊತ್ತು ಸಹಿತ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.