ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಅಬ್ಬರಿಸಿದ್ದ ವರುಣ ಇಂದು ಕೊಂಚ ಬಿಡುವು ನೀಡಿದ್ದು, ಜನಜೀವನ ಸಹಜಸ್ಥಿತಿಗೆ ಮರಳಿದೆ. ಮಂಗಳೂರಿನಲ್ಲಿ ಗುರುವಾರ ಧಾರಾಕಾರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳಲ್ಲಿ ಕೃತಕ ನೆರೆ ಆವರಿಸಿ ವಾಹನ ಸಂಚಾರಕ್ಕೆ ಅನಾನುಕೂಲವಾಗಿತ್ತು.
ನಗರಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿತ್ತು. ಇಡೀ ದಿನ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ರಸ್ತೆ ಕುಸಿತ, ರೈಲ್ವೆ ಹಳಿಯ ಮೇಲೆ ಗುಡ್ಡಕುಸಿತ ಮೊದಲಾದ ಘಟನೆಗಳು ನಡೆದಿದ್ದು, ಮಳೆಯಿಂದ ವಿಮಾನ ಸಂಚಾರದಲ್ಲಿಯೂ ವ್ಯತ್ಯಯವಾಗಿತ್ತು. ಮಳೆಯ ಭೀತಿಯ ಹಿನ್ನೆಲೆಯಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ, ನಿನ್ನೆ ಸುರಿದ ಭಾರಿ ಮಳೆ ಇಂದು ತಗ್ಗಿದೆ. ಇಂದು ಮುಂಜಾನೆಯಿಂದ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಭಾರಿ ಮಳೆಯ ಆತಂಕ ಸದ್ಯ ದೂರವಾಗಿದೆ.
ಇದನ್ನೂ ಓದಿ: ಪಹರಗಂಜ್ನಲ್ಲಿ ಕಟ್ಟಡ ಕುಸಿತ: 30 ಜನರ ರಕ್ಷಣೆ