ಮಂಗಳೂರು: ನಗರದ ಬಜ್ಪೆ ಠಾಣಾ ವ್ಯಾಪ್ತಿಯ ಮಿಜಾರ್ ದೂಮಚಡವು ಎಂಬಲ್ಲಿ ಯುವಕನೋರ್ವನನ್ನು ದೊಣ್ಣೆಯಿಂದ ಹೊಡೆದು ಕಗ್ಗೊಲೆ ಮಾಡಲಾಗಿದೆ. ಮಿಜಾರ್ ಕುಂದೋಟ್ಟುವಿನ ಬರ್ಕೆ ಮನೆ ನಿವಾಸಿ ನವೀನ್ (29) ಮೃತಪಟ್ಟ ದುರ್ದೈವಿ.
ದುಬೈಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಕೆಲಸ ಮಾಡುತ್ತಿದ್ದ ನವೀನ್ 3 ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ನಿನ್ನೆ ರಾತ್ರಿ 11.30 ರ ಸುಮಾರಿಗೆ ಕಟೀಲು ದೇವಸ್ಥಾನಕ್ಕೆ ಹೋಗಿ ಹಿಂದಿರುಗಿ ದೂಮಚಡವು ದಡ್ಡಿ ಕ್ರಾಸ್ ಬಳಿ ಬೈಕ್ ನಿಲ್ಲಿಸಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ನವೀನ್ ಪರಿಚಯದವರೇ ಆದ ರಮೇಶ ಮತ್ತು ನಿತ್ಯಾನಂದ ಕ್ಷುಲ್ಲಕ ಕಾರಣಕ್ಕೆ ‘ಫೋನ್ ಮಾಡಿದರೆ ರಿಸೀವ್ ಮಾಡಲು ಆಗುವುದಿಲ್ಲವಾ? ಎಷ್ಟು ಫೋನ್ ಮಾಡುವುದು?’ ಎಂದು ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ರಮೇಶ ಹಾಗೂ ನಿತ್ಯಾನಂದ ದೊಣ್ಣೆಯಿಂದ ನವೀನ್ ತಲೆಗೆ ಬಲವಾಗಿ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡು ಕುಸಿದು ಬಿದ್ದ ನವೀನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ದೂರು ದಾಖಲಾಗಿದೆ.
ಹಣಕಾಸಿನ ವಿಷಯಕ್ಕೆ ಈ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಇನ್ನೂ ಆರೋಪಿಗಳ ಬಂಧನವಾಗಿಲ್ಲ. ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.