ಪುತ್ತೂರು (ದ.ಕ): ಕೊರೊನಾ ಲಾಕ್ಡೌನ್ ಸಮಯದಲ್ಲಿ ಹಲವು ಬಡ ಕುಟುಂಬಗಳು ಒಪ್ಪೊತ್ತಿನ ಊಟಕ್ಕೂ ಪರಿತಪಿಸುತ್ತಿವೆ. ಉದ್ಯೋಗ ಇಲ್ಲದೇ ಇರುವ ಈ ಕುಟುಂಬಗಳಿಗೆ ಸರ್ಕಾರದಿಂದ ಹಲವು ಯೋಜನೆಗಳನ್ನು ನೀಡುತ್ತಿರುವ ಪರಿಣಾಮ ಈ ಕುಟುಂಬಗಳು ಜೀವಂತವಾಗಿದೆ. ಜನರ ಪರಿಸ್ಥಿತಿ ಇದಾಗಿದ್ದರೆ, ಪ್ರಾಣಿಗಳ ಪರಿಸ್ಥಿತಿಯಂತೂ ಹೇಳ ತೀರದು.
ಮನುಷ್ಯನ ಅತ್ಯಂತ ಪ್ರೀತಿಯ ಪ್ರಾಣಿಯಾಗಿರುವ ನಾಯಿಗಳಿಗೆ ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಆಹಾರದ ಸಮಸ್ಯೆ ಸ್ವಾಭಾವಿಕವಾಗಿ ಉದ್ಭವಿಸಿದೆ. ಈ ಹಿನ್ನೆಲೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರದಲ್ಲಿ ಬೀದಿ ನಾಯಿಗಳಿಗೆ ನಗರಸಭೆ ಮಾಜಿ ಅಧ್ಯಕ್ಷರೊಬ್ಬರು ನಿತ್ಯ ಆಹಾರ ಒದಗಿಸಿ ನೆರವಾಗುತ್ತಿದ್ದಾರೆ.
ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ನಿತ್ಯ ಸುಮಾರು 150ಕ್ಕೂ ಅಧಿಕ ನಾಯಿಗಳಿಗೆ ಆಹಾರ ನೀಡುವ ಕಾರ್ಯ ಮಾಡುತ್ತಿದ್ದಾರೆ. ಅವರು ನಿತ್ಯ ಸಂಜೆ ವೇಳೆಗೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ತಮ್ಮ ದ್ವಿಚಕ್ರ ವಾಹನದಲ್ಲಿ ನಗರದ ತುಂಬೆಲ್ಲಾ ಸಂಚರಿಸಿ ನಾಯಿಗಳಿಗೆ ಆಹಾರ ಒದಗಿಸುತ್ತಾರೆ. ನಾಯಿಗಳಿಗೆ ಹೆಚ್ಚಾಗಿ ಮಾಂಸಾಹಾರವನ್ನೇ ನೀಡುತ್ತಾರಂತೆ ಅದ್ರಲ್ಲೂ ಬಿರಿಯಾನಿಯನ್ನೂ ನೀಡಿ ಆರೈಕೆ ಮಾಡುತ್ತಿದ್ದಾರೆ.
ಕಳೆದ 15 ವರ್ಷಗಳಿಂದ ರಾತ್ರಿ ಸಮಯದಲ್ಲಿ ನಾಯಿಗಳಿಗೆ ಆಹಾರ ನೀಡುತ್ತಿದ್ದರು. ಆದರೆ, ಲಾಕ್ಡೌನ್ ಹಿನ್ನೆಲೆ ಸಂಜೆ ವೇಳೆಯೆ ಆಹಾರ ಹಂಚಲು ಮುಂದಾಗಿದ್ದಾರೆ. ಈ ಸಮಯದಲ್ಲಿ ರಾಜೇಶ್ ಬನ್ನೂರು ತಮ್ಮ ಸಂಕಷ್ಟದ ಜೊತೆಗೆ ನಾಯಿಗಳ ಬಗ್ಗೆ ತೋರಿಸುತ್ತಿರುವ ಕಾಳಜಿ ಪ್ರಶಂಸೆಗೂ ಪಾತ್ರವಾಗಿದೆ.
ಬೀದಿ ನಾಯಿಗಳನ್ನು ಒಂದು ಕಡೆ ಸೇರಿಸಿ ಅವುಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಬೇಕು ಎಂಬ ಇಂಗಿತ ರಾಜೇಶ್ ಬನ್ನೂರು ಅವರದ್ದು. ಅದಕ್ಕಾಗಿ ಸರ್ಕಾರ ಏನಾದರೂ ಭೂಮಿ ನೀಡಿದ್ದಲ್ಲಿ ಸಣ್ಣ ಮಟ್ಟಿನ ಶೆಡ್ ನಿರ್ಮಿಸಿ ಬೀದಿ ನಾಯಿಗಳನ್ನು ಸಾಕಬೇಕೆನ್ನುವ ಆಶಯ ಹೊಂದಿದ್ದಾರೆ.
ಇತ್ತ ರಾಜೇಶ್ ಅವರ ಕಾರ್ಯಕ್ಕೆ ಪುತ್ತೂರಿನ ಹೋಟೆಲ್ಗಳು ಹಾಗೂ ಇಬ್ಬರು ಮುಸ್ಲಿಂ ಬಂದುಗಳು ತಿಂಡಿ ತಿನಿಸು ನೀಡಿ ನೆರವಾಗುತ್ತಿದ್ದಾರೆ. ಅಲ್ಲದೇ ಈ ನಾಯಿಗಳು ಅನಾರೋಗ್ಯಕ್ಕೆ ಒಳಗಾದರೆ ಪಶುವೈದ್ಯರು ಸಹ ಚಿಕಿತ್ಸೆ ನೀಡಿ ನೆರವಾಗುತ್ತಿದ್ದಾರೆ.