ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಆಯ್ದ ಕೆಲವು ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ರಸ್ತೆಗಳನ್ನಾಗಿ ಮೇಲ್ದರ್ಜೆಗೆ ಏರಿಸುವ ಕುರಿತು ತನ್ನ ಶಿಫಾರಸಿನ ಮೇರೆಗೆ ಆಗಿದೆ ಎಂದು ಈಗಿನ ಶಾಸಕರು ನೀಡಿರುವ ಪತ್ರಿಕಾಗೋಷ್ಠಿ ಹೇಳಿಕೆ ಖಂಡನೀಯ. ಪುತ್ತೂರು ಶಾಸಕರು ತಪ್ಪು ಮಾಹಿತಿ ನೀಡಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ ಆರೋಪಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2017 ರಲ್ಲಿ ಪುತ್ತೂರಿನ ಶಾಸಕರಾಗಿದ್ದ ಶಕುಂತಳಾ ಟಿ. ಶೆಟ್ಟಿವರು ಪುತ್ತೂರು ವಿಧಾನಸಭಾ ಕ್ಷೇತ್ರದ ಆಯ್ದ ಕೆಲವು ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸುವಂತೆ ಅಂದಿನ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಪ್ರಸ್ತಾವನೆ ಸ್ವೀಕರಿಸಿದ ಸಚಿವರು ಈ ಪ್ರಸ್ತಾವನೆಯನ್ನು ಒಪ್ಪಿ ಶಿಫಾರಸು ಮಾಡಿ ಮುಂದಿನ ಕ್ರಮಕ್ಕೆ ಆದೇಶಿಸಿರುತ್ತಾರೆ. ಈ ಆದೇಶದ ನಂತರ ಇಲಾಖಾ ಪ್ರಕ್ರಿಯೆಗಳು ಪೂರ್ಣಗೊಂಡು ಇದೀಗ ಪ್ರಸ್ತಾವನೆಗಳು ಅನುಮೋದನೆಗೊಂಡು ಈ ರಸ್ತೆಗಳು ಜಿಲ್ಲಾ ಮುಖ್ಯರಸ್ತೆಗಳಾಗಿ ಮೇಲ್ದರ್ಜೆಗೇರಿದೆ. ಈ ಸಾಧನೆಯನ್ನು ತನ್ನದೆಂದು ಬಿಂಬಿಸಿ ತನ್ನ ಶಿಫಾರಸಿನ ಮೇರೆಗೆ ಆಗಿದೆ ಎಂದು ಹೇಳುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಇಲ್ಲಿಯ ಕೊಂಬೆಟ್ಟು ತಾಲೂಕು ಕ್ರೀಡಾಂಗಣಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದುಕೊಂಡು ಸುಮಾರು 14 ಕೋಟಿ ರೂಪಾಯಿಗಳ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿ ಮಂಜೂರಾಗಿ ಒಂದು ವರ್ಷದ ಹಿಂದೆ ಮೂರು ಕೋಟಿ ಬಿಡುಗಡೆಯಾಗಿದೆ.
ಈ ಕಾಮಗಾರಿಯ ಶ್ರೇಯಸ್ಸು ಎಲ್ಲಿ ಮಾಜಿ ಶಾಸಕಿಯರಿಗೆ ಬರುತ್ತದೋ ಎಂಬ ಭಯದಿಂದ ಈಗಿನ ಶಾಸಕರು ಈ ಕ್ರೀಡಾಂಗಣದ ಕಾಮಗಾರಿಗೆ ನನೆಗುದಿಗೆ ಬೀಳುವಂತೆ ವ್ಯವಸ್ಥಿತವಾಗಿ ಅಡ್ಡಗಾಲು ಹಾಕಿ ಪುತ್ತೂರಿನಲ್ಲಿ ಅಭಿವೃದ್ಧಿಯಲ್ಲಿ ತನ್ನ ನಿರಾಸಕ್ತಿ ತೋರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಇನ್ನು ಪುತ್ತೂರು ಶಾಸಕರು ಇನ್ನಾದರೂ ಪುತ್ತೂರಿಗೆ ಒಂದಷ್ಟು ಅನುದಾನಗಳನ್ನು ತಂದು ಅವರನ್ನು ಆರಿಸಿದ ಜನತೆಯ ಋಣ ತೀರಿಸಲಿ ಎಂದು ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನ ವಿಲ್ಮಾ ಗೊನ್ಸಾಲ್ವಿಸ್, ಗಂಗಾಧರ ರೈ ಉಪಸ್ಥಿತರಿದ್ದರು.