ಪುತ್ತೂರು(ದಕ್ಷಿಣ ಕನ್ನಡ): ಒಂದೆಡೆ ಕೂಲಿ ಕಾರ್ಮಿಕರ ಕೊರತೆ. ಇನ್ನೊಂದೆಡೆ ಅಪಾಯಕಾರಿ ಕೃಷಿ ಚಟುವಟಿಕೆಗಳಿಗೆ ಬಳಸುವ ಸಾಧನ. ಇವೆಲ್ಲದರಿಂದ ಮುಕ್ತಿ ಹೊಂದುವ ನಿಟ್ಟಿನಲ್ಲಿ ಕೃಷಿ ಚಟುವಟಿಕೆಗಳಲ್ಲೊಂದಾದ ತೆಂಗು, ಅಡಿಕೆ ಮುಂತಾದ ಮರಗಳನ್ನು ಏರಲು ಅಪಾಯರಹಿತ ಫೈಬರ್ ಏಣಿಯೊಂದನ್ನು ಇದೀಗ ಪುತ್ತೂರಿನಲ್ಲಿ ಸಿದ್ಧಪಡಿಸಲಾಗಿದೆ.
![Puttur guy prepares fiber ladder](https://etvbharatimages.akamaized.net/etvbharat/prod-images/kn-mng-01-special-eni-pkg-puttur-script-kac10010_03072020113425_0307f_1593756265_822.jpg)
ತೆಂಗಿನಮರ, ಅಡಿಕೆ ಮರ ಸಹಿತ ಪವರ್‌ಮ್ಯಾನ್‌ಗಳಿಗೆ ವಿದ್ಯುತ್ ಕಂಬಗಳನ್ನು ಏರಲು ಸಹಕಾರಿಯಾಗುವ ಈ ಏಣಿಯನ್ನು ಫೈಬರ್ ಬಳಸಿ ನಿರ್ಮಿಸಲಾಗಿದೆ. ಅಕಸ್ಮಾತ್ ವಿದ್ಯುತ್ ತಂತಿಯನ್ನು ಈ ಏಣಿ ಸ್ಪರ್ಶಿಸಿದ್ರೂ ವಿದ್ಯುತ್ ಪ್ರವಹಿಸುವುದಿಲ್ಲ. ಹಾಗಾಗಿ ಮೆಸ್ಕಾಂನಲ್ಲಿ ಕೆಲಸ ಮಾಡುವ ಪವರ್‌ಮ್ಯಾನ್‌ಗಳಿಗೂ ಇದು ಸಹಕಾರಿಯಾಗಲಿದೆ. ಈಗಾಗಲೇ ಮೆಸ್ಕಾಂ ಪವರ್‌ಮ್ಯಾನ್‌ಗಳು ಏಣಿಯನ್ನು ಪ್ರಾಯೋಗಿಕವಾಗಿ ಬಳಕೆ ಮಾಡಿದ್ದಾರೆ.
ಸವಣೂರು ನಿವಾಸಿ ದಯಾನಂದ ಎಂಬುವರು ಈ ಏಣಿಯನ್ನು ಸಿದ್ಧಪಡಿಸಿದ್ದಾರೆ. ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. 20 ಅಡಿ, 10 ಅಡಿ ಹಾಗೂ 5 ಅಡಿ ಉದ್ದದ ಏಣಿಯನ್ನು ತಯಾರಿಸಲಾಗಿದೆ.
ವಿಶೇಷವೆಂದರೆ ಈ ಏಣಿಗೆ ಎಷ್ಟೇ ಪೋರ್ಸ್ ಹಾಕಿದ್ರೂ, ಬೆಂಡಾಗಿ ಏಣಿ ತುಂಡಾಗುವುದಿಲ್ಲ. ಬೆಂಡ್ ಆದ್ರೂ ಮತ್ತೆ ಮೊದಲಿನ ಆ್ಯಂಗಲ್‌ಗೆ ಬರುತ್ತದೆ. ಇದಕ್ಕಾಗಿ ಒಂದೂವರೆ ಇಂಚು ದಪ್ಪ ಹಾಗೂ ಐದು ಲೆಂತ್ ತಿಕ್‌ನೆಸ್ ಇರುವ ಫೈಬರ್ ಪೈಪ್‌ಗಳನ್ನು ಬಳಸಲಾಗಿದೆ. 20 ಅಡಿಯ ಏಣಿ 12 ಕೆಜಿಯಷ್ಟು ಭಾರವಿದೆ. ಅಂದ್ರೆ ಕೃಷಿಕರಿಗೆ ಒಂದು ಕಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ಹೊತ್ತುಕೊಂಡು ಹೋಗಬಹುದು.
![Puttur guy prepares fiber ladder](https://etvbharatimages.akamaized.net/etvbharat/prod-images/kn-mng-01-special-eni-pkg-puttur-script-kac10010_03072020113425_0307f_1593756265_882.jpg)
ಅಲ್ಯೂಮಿನಿಯಂ ಏಣಿಗೆ ಬೇಡಿಕೆ ಕಡಿಮೆಯಾದ್ದರಿಂದ ಲಾಕ್‌ಡೌನ್ ಸಂದರ್ಭದಲ್ಲಿ ಫೈಬರ್ ಏಣಿಯ ತಯಾರಿಸುವ ಯೋಚನೆ ಹೊಳೆಯಿತು. ಅದರಂತೆ ಫೈಬರ್ ಬಳಸಿ ಏಣಿ ಸಿದ್ಧಪಡಿಸಿದೆ. ಇದೀಗ ಒಂದು ತಿಂಗಳ ಹಿಂದೆ ಮಾರುಕಟ್ಟೆಗೆ ಬಿಡಲಾಗಿದೆ. ಬೇಡಿಕೆ ಬರುತ್ತಾ ಇದೆ. ಇನ್ನೂ ಜಾಸ್ತಿಯಾಗುವ ಭರವಸೆಯಿದೆ. ಮುಖ್ಯವಾಗಿ ಮೆಸ್ಕಾಂನವರಿಗೆ ವಿದ್ಯುತ್ ಕಂಬ ಏರಲು ಸಹಕಾರಿಯಾಗಲಿದೆ ಎಂದು ಏಣಿ ತಯಾರಕ ದಯಾನಂದ ಅಭಿಪ್ರಾಯಪಟ್ಟಿದ್ದಾರೆ.