ಪುತ್ತೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ಇಡೀ ಚಿತ್ರರಂಗ ಹಾಗೂ ಅಭಿಮಾನಿಗಳನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಅಪ್ಪು ವಯಸ್ಸಿನ ಅಂತರವಿಲ್ಲದೆ ಎಲ್ಲರನೊಂದಿಗೂ ಆತ್ಮೀಯತೆಯಿಂದ ಬೆರೆಯುತ್ತಿದ್ದರು. ಅವರ ನಿಧನಕ್ಕೆ ಸಣ್ಣ ಮಕ್ಕಳು ಕಣ್ಣೀರಿಟ್ಟಿದ್ದಾರೆ.
ಸರಳತೆ, ಮೃದು ಹೃದಯಿ, ನಗುವಿನಿಂದ ಎಲ್ಲರಿಗೂ ಬೇಗನೆ ಪುನೀತ್ ಹತ್ತಿರವಾಗುತ್ತಿದ್ದರು. ಅಪ್ಪುಗೆ ಹಿರಿಯರು ಮಾತ್ರವಲ್ಲದೆ, ಸಣ್ಣ ಸಣ್ಣ ಮಕ್ಕಳ ಅಭಿಮಾನಿ ಬಳಗ ಕೂಡ ಸಾಕಷ್ಟಿದೆ. ಅದರಂತೆ ದಕ್ಷಿಣಕನ್ನಡ ಜಿಲ್ಲೆಯ ಬಾಲಪ್ರತಿಭೆ, ನೃತ್ಯಗಾರ್ತಿ ದೀಕ್ಷಾ ರೈ ನಟ ಪುನೀತ್ ನಿಧನ ಸುದ್ದಿ ಕೇಳಿ ಕಣ್ಣೀರಿಟ್ಟಿದ್ದಾಳೆ.
ಪುತ್ತೂರಿನ ಸುಧಾನ ವಸತಿ ಶಾಲೆಯಲ್ಲಿ ದೀಕ್ಷಾ 10ನೇ ತರಗತಿಯ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆ ಕೆಲ ವರ್ಷಗಳ ಹಿಂದೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಸಿದ್ದಳು. ಕಾರ್ಯಕ್ರಮಕ್ಕೆ ನಟ ಪುನೀತ್ ಕೂಡ ಆಗಮಿಸಿದ್ದರು.
ಈ ವೇಳೆ ದೀಕ್ಷಾಳ ನೃತ್ಯಕ್ಕೆ ಅಪ್ಪು ಮಾರು ಹೋಗಿದ್ದರು. ನಂತರದ ದಿನಗಳಲ್ಲಿ ದೀಕ್ಷಾಳ ಜೊತೆ ಉತ್ತಮ ಸಂಬಂಧ ಬೆಳೆಸಿದ್ದರು. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಪುನೀತ್ ಅವರಿಗೆ ಪ್ರಶ್ನೆ ಕೇಳುವಂತಹ ಅವಕಾಶ ದೀಕ್ಷಾಳಿಗೆ ಲಭಿಸಿತ್ತು.
ಈ ಕುರಿತಂತೆ ಈಟಿವಿ ಭಾರತದೊಂದಿಗೆ ದೀಕ್ಷಾ ಮಾತನಾಡಿ, ಪುನೀತ್ ರಾಜ್ ಕುಮಾರ್ ಸಾವಿನ ಸುದ್ದಿ ಕೇಳಿ ತುಂಬಾ ಬೇಸರವಾಯಿತು. ಅಪ್ಪು ಸರ್ ನನ್ನ ಮೆಚ್ಚಿನ ನಾಯಕ. ನಾನು ಅವರ ದೊಡ್ಡ ಅಭಿಮಾನಿ.
ನಾನು ಸ್ಪರ್ಧೆಸಿದ್ದ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪುನೀತ್ ಸರ್ ಅತಿಥಿಯಾಗಿ ಬಂದಿದ್ದರು. ಅವರನ್ನು ನೋಡಿ, ಅವರೊಟ್ಟಿಗೆ ಮಾತನಾಡಿ ತುಂಬಾ ಸಂತೋಷವಾಗಿತ್ತು. ಆದರೆ, ಇಂದು ಅವರು ನಮ್ಮ ಜೊತೆ ಇಲ್ಲ ಎಂಬ ವಿಚಾರವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲರೊಟ್ಟಿಗೆ ಬೆರೆಯುತ್ತಿದ್ದ ಅಪ್ಪು ಸರ್ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಪ್ರಾರ್ಥಿಸಿದಳು.
ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳದ ಬಗ್ಗೆ ಹೆಚ್ಚು ಒಲವಿದ್ದ ಪುನೀತ್ ಪುತ್ತೂರಿನಲ್ಲಿ ನಡೆಯುವ ಕೋಟಿ ಚೆನ್ನಯರ ಜೋಡುಕೆರೆ ಕಂಬಳದಲ್ಲೂ ಭಾಗವಹಿಸಿ ಕಂಬಳದ ಬಗ್ಗೆ ತಮ್ಮ ಮೆಚ್ಚುಗೆಯ ಮಾತನಾಡಿದ್ದರು.
ಇದನ್ನೂ ಓದಿ: ನಾಳೆ ಪುನೀತ್ ಅಂತ್ಯಕ್ರಿಯೆ.. ಬೆಳಗಿನವರೆಗೂ ಅಂತಿಮ ದರ್ಶನಕ್ಕೆ ಅವಕಾಶ- ಸಿಎಂ ಬೊಮ್ಮಾಯಿ