ಉಳ್ಳಾಲ (ಮಂಗಳೂರು): ಮಹಿಳೆಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಉಳ್ಳಾಲದ ಕೋಟೆಪುರ ಬಸ್ ನಿಲ್ದಾಣದ ಸಮೀಪ ಸಂಜೆ ನಡೆದಿದೆ. ದೆಹಲಿ ಮೂಲದ ಮಹಿಳೆ ಹತ್ಯೆಗೆ ಒಳಗಾದವರು. ಇವರ ಜತೆಗೆ ಇದ್ದ ಅದೇ ಊರಿನ ನಯೀಮ್ (35) ಎಂಬಾತ ತಲೆಮರೆಸಿಕೊಂಡಿದ್ದಾನೆ. ಎರಡು ದಿನಗಳ ಹಿಂದೆ ಕೋಟೆಪುರಕ್ಕೆ ಬಂದಿದ್ದ ಜೋಡಿ , ಸ್ಥಳೀಯ ಸೆಲೂನ್ ಮಾಲೀಕರ ಮೂಲಕ ಬಾಡಿಗೆ ಮನೆ ಸಂಪರ್ಕಿಸಿ, ಹಮೀದ್ ಎಂಬುವವರ ಮನೆಯನ್ನು ಬಾಡಿಗೆ ಪಡೆದು ವಾಸವಿದ್ದರು. ಮನೆಗೆ ಬರುವಾಗ ಬಟ್ಟೆ ವ್ಯಾಪಾರ ನಡೆಸುವವರು ಎಂದು ತಿಳಿಸಿ, ಇನ್ನೇನು ಬಟ್ಟೆಗಳು ಬರಬೇಕಿದೆ ಎನ್ನುತ್ತ ಮನೆಯಲ್ಲಿದ್ದರು.
ಆದರೆ ಗುರುವಾರ ಸಂಜೆ ವೇಳೆ ಇಬ್ಬರೂ ಮನೆಯಿಂದ ಹೊರಗೆ ಬಾರದಿರುವುದನ್ನು ಗಮನಿಸಿದ ಯುವಕನೊಬ್ಬ ಅನುಮಾನಗೊಂಡು ನೋಡಿದ್ದಾನೆ. ಆ ಮನೆಯ ಶೌಚಾಲಯದೊಳಕ್ಕೆ ಮಹಿಳೆ ಮೃತದೇಹ ಚೂರಿಯಿಂದ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉಳ್ಳಾಲ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಆರೋಪಿ ಬಂಧನಕ್ಕೆ ಜಾಲ ಬೀಸಿದ್ದಾರೆ.
ಪುತ್ತೂರು ನಗರಸಭೆ ಸದಸ್ಯ ಆತ್ಮಹತ್ಯೆ- ಪುತ್ತೂರು: ಉಳ್ಳಾಲದಲ್ಲಿ ಈ ಕಥೆ ಆದರೆ, ನಗರಸಭೆ ಸದಸ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಪುತ್ತೂರು ನಗರದ ಹೊರವಲಯದ ಸಾಲ್ಮರ ಸಮೀಪದ ಊರಮಾಲುದಲ್ಲಿ ಗುರುವಾರ ನಡೆದಿದೆ. ನಗರದ ಶಿವರಾಮ ಸಫಲ್ಯ(46) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಪುತ್ತೂರು ನಗರಸಭೆಯ 1ನೆ ವಾರ್ಡ್ನ ಸದಸ್ಯರಾಗಿದ್ದ ಶಿವರಾಮ, ಗುರುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ಮಾತ್ರ ತಿಳಿದು ಬಂದಿಲ್ಲ. ಅವರ ಪತ್ನಿಯು ಪತಿಯ ಮೊಬೈಲ್ ಗೆ ಕರೆ ಮಾಡಿದ್ದರೂ ಆ ಕರೆ ಸ್ವೀಕರಿಸಿಲ್ಲ, ತಕ್ಷಣ ಪಕ್ಕದ ಮನೆಗೆ ಕರೆ ಮಾಡಿ ನೋಡುವಂತೆ ತಿಳಿಸಿದ್ದರು. ಪಕ್ಕದ ಮನೆಯವರು ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಯಲಿಗೆ ಬಂದಿದೆ. ಮೃತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು, ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಮುಂದುವರಿಸಿದ್ದಾರೆ.
ಅಕ್ರಮ ಗಾಂಜಾ ಮಾರಾಟ, ಆರೋಪಿ ಬಂಧನ: ಮುಕ್ರಂಪಾಡಿಯ ಬಸ್‍ತಂಗುದಾಣದಲ್ಲಿ ಗುರುವಾರ ಮಾದಕವಸ್ತು ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಲ್ನಾಡು ಗ್ರಾಮದ ಬುಳ್ಳೇರಿಕಟ್ಟೆ ನಿವಾಸಿ ಇಕ್ಬಾಲ್ ಪಿ ಯಾನೆ ಇಕ್ಕು(35) ಬಂಧಿತ ಆರೋಪಿ. ಆರೋಪಿಯಿಂದ 40 ಸಾವಿರ ರೂ. ಮೌಲ್ಯದ 1.20 ಕೆಜಿ ತೂಕದ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಪುತ್ತೂರು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಮುಕ್ರಂಪಾಡಿ ಎಂಬಲ್ಲಿ ಬಸ್‍ತಂಗುದಾಣದಲ್ಲಿ 1.20 ಕೆ.ಜಿ ತೂಕದ ಗಾಂಜಾ ಮಾದಕ ವಸ್ತು ಗಾಂಜಾವನ್ನು ಮಾರಾಟಕ್ಕೆ ಇಟ್ಟುಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಪುತ್ತೂರು ನಗರ ಠಾಣೆಯ ಎಸ್ಐ ಸುನೀಲ್ ಕುಮಾರ್ ಮತ್ತು ಎಸ್ ಐ ಶ್ರೀಕಾಂತ್ ರಾಥೋಡ್ ನೇತೃತ್ವದಲ್ಲಿ ಎಎಸ್ಐ ಲೋಕನಾಥ್, ಸ್ಕರಿಯಾ, ಉದಯ, ಪ್ರಶಾಂತ್ ರೈ, ಜಗದೀಶ್, ಸುಬ್ರಹ್ಮಣ್ಯ, ರೇವತಿ, ಶ್ರೀಮಂತ್ ಅವರು ರೌಂಡ್ಸ್ ಕರ್ತವ್ಯದಲ್ಲಿರುವ ವೇಳೆ ಮುಕ್ರಂಪಾಡಿ ಬಸ್‍ತಂಗುದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿಯನ್ನು ವಿಚಾರಿಸಿದ್ದಾರೆ.
ಆಗ ಆತನ ಕೈ ಚೀಲ ಪರಿಶೀಲನೆ ಮಾಡಿದ್ದು, ಪ್ಲಾಸ್ಟಿಕ್ ಕವರ್ನಲ್ಲಿ ಗಾಂಜಾದ ಒಣಗಿದ ಹೂ, ಎಲೆ, ಮೊಗ್ಗು ಮತ್ತು ಬೀಜಗಳು ಇರುವುದು ಕಂಡು ಬಂದಿದೆ, ವಾಸನೆಯಿಂದ ಮಾದಕ ವಸ್ತು ಗಾಂಜಾ ಎಂದು ಖಚಿತ ಪಡಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ.
ಇದನ್ನೂಓದಿ:ಮೊಬೈಲ್ನಲ್ಲೇ ತಲಾಖ್ ನೀಡಿದ ಪತಿ.. ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ