ಪುತ್ತೂರು(ದಕ್ಷಿಣ ಕನ್ನಡ): ರಾಜ್ಯದಲ್ಲೇ ಪ್ರಥಮವಾಗಿ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಹಿರಿಯ ಕಾರ್ಯಕರ್ತರಿಗೆ ಗೌರವಾರ್ಪಣೆ ಕಾರ್ಯಕ್ರಮ ಭಾನುವಾರ ಸಾಲ್ಮರ ಕೊಟೆಚ್ಚಾ ಹಾಲ್‍ನಲ್ಲಿ ಜರುಗಿತು.
ಸಭಾಂಗಣದಲ್ಲಿ ಸೇರಿದ್ದ ತಾಲೂಕಿನ ಸುಮಾರು 221 ಬೂತ್‍ಗಳ ತಲಾ ಐದು ಮಂದಿಯಂತೆ ಒಂದೂ ಸಾವಿರಕ್ಕೂ ಅಧಿಕ ಹಿರಿಯ ಕಾರ್ಯಕರ್ತರಿಗೆ ಅವರು ಕುಳಿತಲ್ಲಿಗೆ ತೆರಳಿದ ಕ್ಷೇತ್ರದ ಶಾಸಕರು, ಇನ್ನಿತರ ಗಣ್ಯರು ತೆರಳಿ ಶಾಲು ಹೊದಿಸಿ, ಹಾರ ಹಾಕಿ, ಸ್ಮರಣಿಕೆ, ಸಿಹಿತಿಂಡಿ ನೀಡಿ ಗೌರವಾರ್ಪಣೆ ಸಲ್ಲಿಸಿದ್ದು ವಿಶೇಷವಾಗಿತ್ತು. ಗೌರವಾರ್ಪಣೆ ಮೊದಲು ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿ ಗಣ್ಯರು ವೇದಿಕೆಯಲ್ಲಿ ಹಿರಿಯ ಕಾರ್ಯಕರ್ತರಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮುಖಂಡರು ದೀಪಾವಳಿ ಅಂಗವಾಗಿ ಜೋಡಿಸಿಟ್ಟಿದ್ದ ದೀಪಾವಳಿ ಸಂಕೇತವಾದ ಹಣತೆಯನ್ನು ಉರಿಸಿದರು. ಒಟ್ಟಾರೆಯಾಗಿ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಬಿಜೆಪಿ ಹಿರಿಯ ಪ್ರಕೋಷ್ಠದ ಸಂಚಾಲಕ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಮುಂದಿನ 2-3 ವರ್ಷದಲ್ಲಿ ಆರ್ಎಸ್ಎಸ್ಗೆ 100 ವರ್ಷ ತುಂಬಲಿದೆ. ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆ ನಿರ್ಣಾಯಕ ದಿನವಾಗಿದ್ದು, ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದರು.
ಜತೆಗೆ ದೇಶದ ಭವಿಷ್ಯ ನಿರ್ಧಾರ ಮಾಡುವ ಈ ಎರಡು ಚುನಾವಣೆ ಕುರಿತು ಈಗಾಗಲೇ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಗೆದ್ದು ಆಡಳಿತ ಚುಕ್ಕಾಣಿ ಹಿಡಿದು 370 ಆರ್ಟಿಕಲ್, ಗೋಹತ್ಯೆ ನಿಷೇಧ ಹಿಂಪಡೆಯುತ್ತೇವೆ ಎಂದು ಘಂಟಾಘೋಷವಾಗಿ ಹುಚ್ಚು ಹುಚ್ಚಾಗಿ ಮಾತುಗಳನ್ನಾಡುತ್ತಿದೆ. ಅವರಿಗೆ ತಕ್ಕ ಶಾಸ್ತಿ ಮಾಡಲು ಚುನಾವಣಾ ಪೂರ್ವ ಕಾರ್ಯಗಳನ್ನು ಮಾಡಬೇಕಾಗಿದೆ ಎಂದು ಕರೆ ನೀಡಿದರು. ಹಿರಿಯರು ಹಾಕಿಕೊಟ್ಟ ವೈಚಾರಿಕೆ ನೆಲೆಯಲ್ಲಿ ಇಂದು ಬಿಜೆಪಿ ಬೆಳೆದು ಬಂದಿದ್ದು, ಅಂತಹವರಿಗೆ ಇಂದು ಗೌರವಾರ್ಪಣೆ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಶಾಸಕ ಸಂಜೀವ ಮಠಂದೂರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ದೇಶ ಪರಮ ವೈಭವದತ್ತ ಸಾಗುತ್ತಿದ್ದು, 60 ವರ್ಷಗಳ ಹಿರಿಯರ ಕಲ್ಪನೆ ಇದಕ್ಕೆ ಕಾರಣ. ದೇಶಕ್ಕೆ ಭದ್ರ ಬುನಾದಿಯನ್ನು ಹಿರಿಯ ಬಿಜೆಪಿ ಕಾರ್ಯಕರ್ತರು ಹಾಕಿಕೊಟ್ಟಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಈ ಮೂಲಕ ಪ್ರತಿಯೊಬ್ಬ ನಾಗರಿಕನ ಯೋಚನೆಗಳ ಲಾಭ ಪಕ್ಷಕ್ಕೆ ಸಿಗಬೇಕು. ಹೋರಾಟಗಳು ಫಲ ಕೊಡುವ ಕಾಲಘಟ್ಟದಲ್ಲಿ ಇಂದು ಹಿರಿಯರಿಗೆ ಗೌರವಾರ್ಪಣೆ ನಡೆಯುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಮಾಜಿ ಎಪಿಎಂಸಿ ಅಧ್ಯಕ್ಷ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಹಿರಿಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ನಾರಾಯಣ ಗಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಟಿಆರ್ಎಸ್ಗೆ ರಾಜೀನಾಮೆ ನೀಡಿದ ನಾಲ್ಕೇ ದಿನದಲ್ಲಿ ಬಿಜೆಪಿ ಸೇರಿದ ಮಾಜಿ ಸಂಸದ