ಮಂಗಳೂರು: ಮನೆಗಳ ಫರ್ನಿಚರ್ಗಳು, ಮರದ ವಸ್ತುಗಳಿಗೆ ದೊಡ್ಡ ಸಮಸ್ಯೆ ತಂದೊಡ್ಡುವುದು ಗೆದ್ದಲು. ಈ ಗೆದ್ದಲು ನಿವಾರಣೆಗೆ ಮಾಡುವ ಪ್ರಯತ್ನಗಳು, ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳು ಹೆಚ್ಚು ಪರಿಣಾಮಕಾರಿಯಲ್ಲ. ಇದಕ್ಕೊಂದು ಶಾಶ್ವತ ಪರಿಹಾರವನ್ನು ಪುತ್ತೂರು ಸುಧಾನ ವಸತಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಕಂಡು ಹಿಡಿದಿದ್ದಾರೆ.
ದಡ್ಡಾಲದ ಮರ ಹೆಚ್ಚೇನೂ ಉಪಯೋಗಕ್ಕೆ ಬಾರದ ಮರ. ಆದರೆ ಈ ಮರದ ತೊಗಟೆಯನ್ನು ಇದೀಗ ಇತರ ಮರಗಳಿಂದ ಮಾಡಿದ ಫರ್ನಿಚರ್ ಸಾಮಾಗ್ರಿಗಳಿಗೆ ತಗುಲುವ ಗೆದ್ದಲು ನಾಶಕ್ಕೆ ಉಪಯೋಗಿಸಬಹುದೆಂಬುದನ್ನು ಪುತ್ತೂರು ಸುಧಾನ ಪ್ರೌಢ ಶಾಲೆಯ ಈ ವಿದ್ಯಾರ್ಥಿನಿಯರು ತೋರಿಸಿಕೊಟ್ಟಿದ್ದಾರೆ.
ಈ ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯರಾದ ಸ್ತುತಿ ಎಂ.ಎಸ್. ಮತ್ತು ಸಂಧ್ಯಾ ಪ್ರಭು ಈ ಸಾಧನೆ ಮಾಡಿದ ವಿದ್ಯಾರ್ಥಿನಿಯರಾಗಿದ್ದು, ತಮ್ಮ ಸಾಧನೆಗೆ ಅವರು ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಂಪಿಯಾಡ್ನಲ್ಲಿ ರಜತ ಪದಕವನ್ನು ಪಡೆದಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಶಾಲೆಯ ಶಿಕ್ಷಕಿ ಸಾಧನ ಅವರು ಮಾರ್ಗದರ್ಶನ ನೀಡಿದ್ದು, ಅದರಂತೆ ಈ ಇಬ್ಬರು ವಿದ್ಯಾರ್ಥಿನಿಯರು ಈ ಸಾಧನೆ ಮಾಡಿದ್ದಾರೆ.
ಎರಡು ರೀತಿಯ ಪ್ರಯೋಗಗಳನ್ನು ಮಾಡಲಾಗಿದ್ದು, ಮೊದಲನೇಯದಾಗಿ ದಡ್ಡಾಲದ ಮರದ ಎಲೆಯಿಂದ ದ್ರಾವಣ ತಯಾರಿಸಲಾಗಿತ್ತು. ಬಳಿಕ ದಡ್ಡಾಲದ ಮರದ ತೊಗಟೆಯಿಂದ ದ್ರಾವಣ ತಯಾರಿಸಲಾಗಿತ್ತು. ಇದರಲ್ಲಿ ತೊಗಟೆಯಿಂದ ಮಾಡಿದ ದ್ರಾವಣ ಹೆಚ್ಚಿನ ಪರಿಣಾಮಕಾರಿ ಎಂದು ಅಧ್ಯಯನದಿಂದ ತಿಳಿದಿದೆ. ಇವುಗಳನ್ನು ಗೆದ್ದಲು ಬಾರದಂತೆ ತಡೆಯಲು ಮರದ ಸಾಮಾಗ್ರಿಗಳಿಗೆ ಬಳಸಬಹುದಾಗಿದೆ.
ಯಾವುದೇ ಕೃತಕ ವಸ್ತು, ರಾಸಾಯನಿಕ ವಸ್ತುಗಳು ಬಳಸದೆ ಈ ದ್ರಾವಣ ತಯಾರಿಸಲಾಗಿದ್ದು, ಶೀಘ್ರ ಪರಿಣಾಮ ಬೀರುತ್ತದೆ ಎಂಬುದನ್ನು ಕಳೆದ ಒಂದು ವರ್ಷಗಳ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ.