ಪುತ್ತೂರು: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ ನೂತನ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ದಿನೇಶ್ ಮೆದು ಹಾಗೂ ಉಪಾಧ್ಯಕ್ಷರಾಗಿ ಹಾಲಿ ಉಪಾಧ್ಯಕ್ಷ ಮಂಜುನಾಥ ಎನ್.ಎಸ್ ಅವಿರೋಧವಾಗಿ ಪುನರಾಯ್ಕೆ ಆಗಿದ್ದಾರೆ.
ಪುತ್ತೂರು ಎಪಿಎಂಸಿ ಆಡಳಿತದ ಕೊನೆಯ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಚುನಾವಣಾ ಪ್ರಕ್ರಿಯೆ ಮಂಗಳವಾರ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು. ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಹಾಲಿ ಅಧ್ಯಕ್ಷ ದಿನೇಶ್ ಮೆದು ಮತ್ತು ಹಾಲಿ ಉಪಾಧ್ಯಕ್ಷ ಮಂಜುನಾಥ್ ಎನ್.ಎಸ್. ಅವರಿಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆ ಘೋಷಿಸಿದರು.
ಈ ಬಾರಿಯ ಆಡಳಿತ ಮಂಡಳಿಯ ಮೊದಲ ಅವಧಿಯಲ್ಲಿ ಬೂಡಿಯಾರ್ ರಾಧಾಕೃಷ್ಣ ರೈ ಅಧ್ಯಕ್ಷರಾಗಿ, ಬಾಲಕೃಷ್ಣ ಬಾಣಜಾಲ್ ಉಪಾಧ್ಯಕ್ಷರಾಗಿದ್ದರು. 2ನೇ ಅವಧಿಗೆ ದಿನೇಶ್ ಮೆದು, ಮಂಜುನಾಥ್ ಎನ್.ಎಸ್. ಆಯ್ಕೆಯಾಗಿದ್ದರು. ಇದೀಗ ಕೊನೆಯ ಅವಧಿಯಲ್ಲಿಯೂ ಅವರೇ ಮರು ಆಯ್ಕೆಯಾಗಿದ್ದಾರೆ. ಅವರನ್ನೇ ಪುನರಾಯ್ಕೆ ಮಾಡಲು ಬಿಜೆಪಿಯ ಆಳುವ ನಿರ್ದೇಶಕ ಮಂಡಳಿ ಸರ್ವಾನುಮತದ ತೀರ್ಮಾನ ಕೈಗೊಂಡ ಹಿನ್ನೆಲೆ ಅವಿರೋಧ ಪುನರಾಯ್ಕೆ ನಡೆದಿದೆ ಎಂದು ತಿಳಿದು ಬಂದಿದೆ.
ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಇಡೀ ದೇಶದಲ್ಲಿ ರೈತರು ಮತ್ತು ಎಪಿಎಂಸಿ ಬಗ್ಗೆ ಚರ್ಚೆಯಾಗುತ್ತಿದೆ. ಈ ಸಂದರ್ಭದಲ್ಲಿ ಪುತ್ತೂರು ಎಪಿಎಂಸಿಯಲ್ಲಿ 10 ಕೋಟಿ ರೂ. ಅಭಿವೃದ್ಧಿ ಕಾಮಗಾರಿ ಮೊನ್ನೆಯಷ್ಟೇ ಚಾಲನೆ ನೀಡುವ ಮೂಲಕ ಈ ಸಮಿತಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ಎಪಿಎಂಸಿಯು ರೈತ ಸ್ನೇಹಿಯಾಗಿದೆ. ವರ್ತಕರು ಎಪಿಎಂಸಿಗೆ ನೀಡುತ್ತಿದ್ದ ಸೆಸ್‌ನ್ನು 35 ಪೈಸೆಗೆ ಇಳಿಸುವ ಮೂಲಕ ಸಮಿತಿಯನ್ನು ವರ್ತಕ ಸ್ನೇಹಿಯನ್ನಾಗಿ ಮಾಡಲಾಗಿದೆ. ರೈತರಿಗೆ ಆಗುತ್ತಿರುವ ಮೋಸ, ದಳ್ಳಾಳಿಗಳಿಂದ ವಂಚನೆ, ಶೋಷಣೆಗಳನ್ನು ತಡೆಯಲು ಹಾಗೂ ಸರಿಯಾದ ಮಾರುಕಟ್ಟೆ ಮತ್ತು ಧಾರಣೆ ಸಿಗಬೇಕು ಎಂಬ ನಿಟ್ಟಿನಲ್ಲಿ 1966ರಲ್ಲಿ ಎಪಿಎಂಸಿಯನ್ನು ಸ್ಥಾಪಿಸಲಾಗಿತ್ತು. ಇದೀಗ ಅದೇ ಉದ್ದೇಶದೊಂದಿಗೆ ಎಪಿಎಂಸಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.
ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ನಿರ್ದೇಶಕ ಅಬ್ದುಲ್ ಶಕೂರ್ ಹಾಜಿ, ಮಾಜಿ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ ಮತ್ತಿತರರು ಶುಭ ಹಾರೈಸಿದರು. ನೂತನ ಅಧ್ಯಕ್ಷ ದಿನೇಶ್ ಮೆದು ಅವರು ಕೃತಜ್ಞತೆ ತಿಳಿಸಿದರು. ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ, ಉಪ ತಹಸೀಲ್ದಾರ್ ಸುಲೋಚನಾ, ತಾಲೂಕು ಕಚೇರಿಯ ಚುನಾವಣಾ ಶಾಖೆಯ ನಾಗೇಶ್, ಎಪಿಎಂಸಿ ನಿರ್ದೇಶಕರು, ವರ್ತಕ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.